ಹವಾಮಾನ ಬದಲಾವಣೆ ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗುತ್ತಿದ್ದು, ಬರಲಿರುವ ದಿನಗಳಲ್ಲಿ ಜಗತ್ತು ದೊಡ್ಡ ಅಪಾಯವನ್ನೇ ಎದುರಿಸಬೇಕಾದ ಲಕ್ಷಣಗಳನ್ನು ತೋರಿಸುತ್ತಿದೆ.
ಸಿಒಪಿ 25 ಶೃಂಗಸಭೆಯಲ್ಲಿ ಪ್ಯಾರಿಸ್ ಗುರಿಗೆ ನಿರ್ಲಕ್ಷ್ಯ
ಸ್ಪೇನ್ ದೇಶದ ಮ್ಯಾಡ್ರಿಡ್‌ನಲ್ಲಿ ಆ ವರ್ಷದ ಡಿಸೆಂಬರ್ 2 ರಿಂದ 13ರವರೆಗೆ ಒಟ್ಟು 12 ದಿನಗಳ ಕಾಲ ಈ ಶೃಂಗಸಭೆ ನಡೆದಿತ್ತು. ಆದರೆ, ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಗಮನಾರ್ಹ ಒಪ್ಪಿಗೆಗಳನ್ನು ಕಾಣದ್ದರಿಂದ ಪ್ಯಾರಿಸ್ ಒಪ್ಪಂದದ ಉತ್ಸಾಹ ಠುಸ್ಸೆಂದಿತ್ತು. ನಾಲ್ಕು ವರ್ಷಗಳ ಹಿಂದೆ 2015ರಲ್ಲಿ ನಡೆದ ಪಕ್ಷಗಳ ಶೃಂಗಸಭೆ (ಕಾನ್ಫರೆನ್ಸ್ ಆಫ್ ಪಾರ್ಟೀಸ್ - ಸಿಒಪಿ) 25ರಲ್ಲಿ ಜಾಗತಿಕ ತಾಪಮಾನವನ್ನು ಈ ಶತಮಾನದ ಅಂತ್ಯದೊಳಗೆ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ತಗ್ಗಿಸುವ ಗುರಿಯನ್ನು ಇಟ್ಟುಕೊಂಡಿತ್ತು. ಈಗ ಪ್ಯಾರಿಸ್ ಒಪ್ಪಂದವನ್ನು ಜಾರಿಗೊಳಿಸಬೇಕೆಂದು ಗಂಭೀರವಾಗಿ ಯೋಚಿಸುತ್ತಿರುವ ಜಗತ್ತಿನ ಎಲ್ಲ ದೇಶಗಳಿಗೆ ನೀಡಿದ್ದ ಗುರಿಯಾಗಿತ್ತು ಅದು.
ಕಳೆದ 10 ವರ್ಷಗಳಲ್ಲಿ ಹಸಿರುಮನೆ ಪರಿಣಾಮ ಉಂಟು ಮಾಡುವ ಅನಿಲಗಳು ವರ್ಷಕ್ಕೆ ಸರಾಸರಿ ಶೇಕಡಾ 1.5ರಷ್ಟು ಪ್ರಮಾಣದಲ್ಲಿ ವಾತಾವರಣಕ್ಕೆ ಬಿಡುಗಡೆಯಾಗಿವೆ. ಅಲ್ಲದೇ, ಕಳೆದ ವರ್ಷಗಳಲ್ಲಿ ಅಂದಾಜು 55.3 ಗಿಗಾ (ನೂರು ಕೋಟಿ) ಟನ್ ಇಂಗಾಲದ ಮೊನಾಕ್ಷೈಡ್ ಅನಿಲ ಬಿಡುಗಡೆಯಾಗುವ ಮೂಲಕ ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಈ ಅಂಕಿಅಂಶಗಳು ಭವಿಷ್ಯದ ಅಪಾಯದ ಕುರಿತು ಎಚ್ಚರಿಕೆ ನೀಡುವಂಥವು.
ಸಿಒಪಿ 25 ಶೃಂಗಸಭೆಯ ಪ್ರಾರಂಭಕ್ಕೂ ಮುನ್ನ, ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಕ್ರಿಯಾ ಯೋಜನೆ ರೂಪಿಸಲು 195 ದೇಶಗಳನ್ನು ವಿಶ್ವಸಂಸ್ಥೆ ಆಗ್ರಹಿಸಿತ್ತು. ಆದರೆ, ಚರ್ಚೆಗಳು ನಡೆದಾಗ, ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ನುಸುಳುವ ಮೂಲಕ ಬಿಕ್ಕಟ್ಟು ಮೂಡಲು ಕಾರಣವಾಯಿತು.
ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯು, ಪರಿಸರ ಯೋಜನೆಗಳ ಗುರಿಗಳನ್ನು ತಲುಪಲು ಕ್ರಿಯಾ ಯೋಜನೆಯನ್ನು ಒಂದು ವರ್ಷದೊಳಗೆ ಜಾರಿಗೊಳಿಸಬೇಕು. ಈ ಉದ್ದೇಶ ಈಡೇರಿಕೆಗಾಗಿ ರಾಷ್ಟ್ರೀಯ ದೃಢ ನಿರ್ಧಾರ ಮತ್ತು ಸಹಕಾರ (ನ್ಯಾಶನಲ್ ಡಿಟರ್ಮಿನೇಶನ್ ಅಂಡ್ ಕೋಆಪರೇಶನ್ – ಎನ್‌ಡಿಸಿ) ಹೊಂದಬೇಕು ಎಂದು ಸದಸ್ಯ ದೇಶಗಳನ್ನು ಆಗ್ರಹಿಸಿದ್ದರು. ಜಾಗತಿಕ ತಾಪಮಾನವನ್ನು ನಿಯಂತ್ರಿಸಬೇಕೆಂದರೆ, ಇಂಗಾಲದ ಬಿಡುಗಡೆಯನ್ನು 2050 ರೊಳಗೆ ಸ್ಥಗಿತಗೊಳಿಸಬೇಕಾದ ಅವಶ್ಯಕತೆ ಕುರಿತೂ ಅವರು ಒತ್ತು ನೀಡಿದ್ದರು.
ವಾಸ್ತವ ಏನೆಂದರೆ, ಪ್ರಸಕ್ತ ಜಾಗತಿಕ ತಾಪಮಾನ ಏರಿಕೆ ಅನುಪಾತ ಇದೇ ರೀತಿ ಅನಿಯಂತ್ರಿತವಾಗಿ ಮುಂದುವರಿದಿದ್ದೇ ಆದಲ್ಲಿ, ಸದರಿ ಗುರಿಯನ್ನು ಸಾಧಿಸುವಲ್ಲಿ ಜಗತ್ತಿನ ದೇಶಗಳು 2013 ರಲ್ಲಿಯೇ ವಿಫಲವಾಗಲಿವೆ.
ತೀವ್ರಗೊಳ್ಳುತ್ತಿರುವ ಜಾಗತಿಕ ತಾಪಮಾನ ಏರಿಕೆ
ಜಾಗತಿಕ ತಾಪಮಾನ ಕೇವಲ ಶೇಕಡಾ 1.1ರಷ್ಟು ಏರಿದ್ದಕ್ಕೇ ಭೂಮಂಡಲದಲ್ಲಿ ನೈಸರ್ಗಿಕ ಪ್ರಕೋಪಗಳು ಉಂಟಾಗಿ ದೊಡ್ಡ ಪ್ರಮಾಣದ ಜೀವ ಹಾಗೂ ಆಸ್ತಿ ಹಾನಿಗೆ ಕಾರಣವಾಗಿದೆ. ಅಭಿವೃದ್ಧಿಶೀಲ ದೇಶಗಳ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿರುವುದನ್ನು ಈ ಬೆಳವಣಿಗೆ ತೋರಿಸಿದೆ.
ಈ ಸಮಸ್ಯೆ ನಿಯಂತ್ರಣವಾಗಬೇಕೆಂದರೆ, ಇಂಗಾಲದ ಬಿಡುಗಡೆ ಪ್ರಮಾಣವನ್ನು 2020 ರಿಂದ 2030 ರೊಳಗೆ ಶೇಕಡಾ7.6 ರಷ್ಟು ಕಡಿತಗೊಳಿಸಬೇಕು. ಸದರಿ ಗುರಿಯನ್ನು ಸಾಧಿಸುವುದು ಜಗತ್ತಿನ ಪಾಲಿಗೆ ಈಗ ಅನಿವಾರ್ಯವಾಗಿದೆ. ಒಂದು ವೇಳೆ ಈ ಗುರಿಗಳನ್ನು ಸಾಧಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳದಿದ್ದರೆ, 2100 ರ ಹೊತ್ತಿಗೆ ಜಾಗತಿಕ ತಾಪಮಾನವು 3.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗುವ ಎಚ್ಚರಿಕೆಯು ಕಳವಳ ಮೂಡಿಸಿರುವ ವಿಷಯವಾಗಿದೆ.
ಪ್ರಸ್ತುತ ಜಗತ್ತಿನಾದ್ಯಂತ ಶೇಕಡಾ ೭೮ರಷ್ಟು ಹಸಿರುಮನೆ ಅನಿಲಗಳು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ರಷ್ಯ, ಜಪಾನ್, ಕೊರಿಯಾ, ಚೀನಾ, ಭಾರತ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯ, ಬ್ರೆಜಿಲ್, ಅರ್ಜೈಂಟೈನಾ ಹಾಗೂ ಯುರೋಪ್ ಒಕ್ಕೂಟದ ಕೆಲವು ದೇಶಗಳಿಂದ ಬಿಡುಗಡೆಯಾಗುತ್ತಿವೆ. ಹೀಗಾಗಿ, ಇಂಗಾಲ ಬಿಡುಗಡೆ ತಡೆಯುವುದಕ್ಕೆ ಕ್ರಮಗಳನ್ನು ಕೈಗೊಳ್ಳಲು ಜಿ-20 ಒಕ್ಕೂಟದಲ್ಲಿರುವಂತಹ ಶ್ರೀಮಂತ ದೇಶಗಳು ತೋರುತ್ತಿರುವ ನಿರ್ಲಕ್ಷ್ಯದಿಂದ ಸದರಿ ಯೋಜನೆ ಇದುವರೆಗೆ ಪ್ರಾರಂಭವೇ ಆಗದಿರುವುದು ಇದರಿಂದ ಸ್ಪಷ್ಟ. ಪ್ಯಾರಿಸ್ ಒಪ್ಪಂದದ ಗುರಿಗಳನ್ನು 2020ರೊಳಗೆ ತಲುಪಲು ಬೇಕಾದ ಕ್ರಿಯಾ ಯೋಜನೆಯನ್ನು ಹೊಂದದೇ ಇರುವುದರಿಂದ, 2020 ರ ನಂತರದ ಅವಧಿಯಲ್ಲಿ ಇಂಗಾಲದ ಬಿಡುಗಡೆ ಹಾಗೂ ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ ಗೊಂದಲ ತಲೆದೋರಿದೆ.
ಅತ್ಯಧಿಕ ಪ್ರಮಾಣದಲ್ಲಿ ಇಂಗಾಲ ಬಿಡುಗಡೆ ಮಾಡುತ್ತಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಮೆರಿಕವು, ಪ್ಯಾರಿಸ್ ಒಪ್ಪಂದದಿಂದ ಹೊರಬರುವುದಾಗಿ ಘೋಷಿಸಿರುವುದು ಈ ಜಾಗತಿಕ ಮಹತ್ವದ ವಿಷಯದಲ್ಲಿ ಶ್ರೀಮಂತ ದೇಶಗಳ ನಿಲುವು ಹೇಗಿದೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಫಲಿಸಿದೆ. ಅಲ್ಲದೇ, ಶೇಕಡಾ ೨೮ರಷ್ಟು ಇಂಗಾಲ ಬಿಡುಗಡೆ ಮಾಡುವ ಮೂಲಕ ಸಮಸ್ಯೆಯನ್ನು ಬಿಗಡಾಯಿಸಲು ಕಾರಣವಾಗಿರುವ ಚೀನಾ ದೇಶ, ಸಮಸ್ಯೆ ಪರಿಹರಿಸಲು ತನ್ನ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ವಿಫಲವಾಗಿರುವುದು ಈ ನಿಟ್ಟಿನಲ್ಲಿ ಗಮನಾರ್ಹ.
ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಅಂಶ ಹೊಂದಿರುವ ಪ್ಯಾರಿಸ್ ಒಪ್ಪಂದದ 6ನೇ ಅನುಚ್ಛೇದ ಕುರಿತಂತೆ ಸದಸ್ಯ ದೇಶಗಳು ಪರಸ್ಪರ ತಿಕ್ಕಾಟದಲ್ಲಿ ತೊಡಗಿವೆ. ಕ್ಯೊಟೊ ಒಪ್ಪಂದಿಂದ ಪ್ಯಾರಿಸ್ ಒಪ್ಪಂದದವರೆಗೆ ಇಂಗಾಲ ಬಿಡುಗಡೆ ನಿಯಂತ್ರಣ ಮತ್ತು ಸ್ವಚ್ಛ ಕಾರ್ಯವಿಧಾನದ ಅಭಿವೃದ್ಧಿಗೆ (ಕ್ಲೀನ್ ಡೆವಲಪ್‌ಮೆಂಟ್ ಮೆಕ್ಯಾನಿಸಮ್ – ಸಿಡಿಎಂ) ಸಂಬಂಧಿಸಿದಂತೆ, ಎಣಿಕೆ ಸಂಬಂಧಿ ಮಾನದಂಡ ಘಟಕಗಳಿಗೆ (ಕೌಂಟ್ ರಿಲ್ಯಾಟೆಡ್ ಸ್ಟ್ಯಾಂಡರ್ಡ್ ಯುನಿಟ್ಸ್ – ಸಿಇಆರ್) ಅನ್ವಯಿಸುವ ಗುರಿಗಳನ್ನು ತಲುಪಲು ಯಾವುದೇ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗಿಲ್ಲ. ಸದಸ್ಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣ.
ಸ್ವಚ್ಛ ಕಾರ್ಯವಿಧಾನದ ಅಂಗವಾಗಿ, ಒಂದು ಟನ್ ಇಂಗಾಲ ಅನಿಲ ಬಿಡುಗಡೆಯನ್ನು ಒಂದು ಕ್ರೆಡಿಟ್ ಎಂದು ಅಭಿವೃದ್ಧಿಶೀಲ ದೇಶಗಳಲ್ಲಿ ಪರಿಗಣಿಸಲಾಗುತ್ತದೆ. ಅಲ್ಲದೇ, ಇಂತಹ ಕ್ರೆಡಿಟ್‌ಗಳ ಮಾರಾಟ ಹಾಗೂ ಖರೀದಿಗೂ ಅಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಕೈಗಾರಿಕಾ ಅಭಿವೃದ್ಧಿ ಸಾಧಿಸಿರುವ ದೇಶಗಳು ಸುಸ್ಥಿರ ಅಭಿವೃದ್ಧಿಗಾಗಿ ಇಂಗಾಲ ಬಿಡುಗಡೆಯನ್ನು ನಿಯಂತ್ರಿಸಲಿಕ್ಕಾಗಿ ಇಂತಹ ನೋಂದಾಯಿತ ಕ್ರೆಡಿಟ್‌ಗಳನ್ನು ಬಳಕೆ ಮಾಡಿಕೊಳ್ಳುತ್ತವೆ. ಇಂಗಾಲ ಬಿಡುಗಡೆ ಸಮಸ್ಯೆಯನ್ನು ನಿಯಂತ್ರಿಸಲು ಈ ವ್ಯವಸ್ಥೆ ದಾರಿ ಮಾಡಿಕೊಡುವುದರಿಂದ, ಕ್ಯೊಟೊ ಒಪ್ಪಂದದಲ್ಲಿ ಕ್ರೆಡಿಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾಗಿ ಹೇಳಲಾಗಿತ್ತು.
ಇಂಗಾಲ ಬಿಡುಗಡೆಯ ಮಾನದಂಡ ಘಟಕಗಳ ಗುರಿಯನ್ನು 2020 ರ ಗಡುವಿನ ಒಳಗೆ ಸಾಧಿಸಿದ ದೇಶಗಳಿಗೆ ಸಂಬಂಧಿಸಿದಂತೆ ಯಾವುದೇ ಅಂತಿಮ ನಿರ್ಣಯವನ್ನು ತೆಗೆದುಕೊಂಡಿಲ್ಲ. ಭಿನ್ನಮತ ತಲೆದೋರಲು ಇದು ಪ್ರಮುಖ ಕಾರಣವಾಗಿದೆ. ಹೀಗಾಗಿ, ಪ್ಯಾರಿಸ್ ಒಪ್ಪಂದದ ಅನುಚ್ಛೇದ 6ಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಒದಗಿಸಬೇಕಾದ ಅವಶ್ಯಕತೆಯನ್ನು ಇದು ಒತ್ತಿ ಹೇಳುತ್ತದೆ.
ಇಂಗಾಲ ಬಿಡುಗಡೆ ವ್ಯಾಪಾರಕ್ಕೆ ಸಂಬಂಧಿಸಿದ ಅನುಚ್ಛೇದ 6.2 ಮತ್ತು ಇಂಗಾಲ ಬಿಡುಗಡೆ ನಿಯಂತ್ರಣಕ್ಕೆ ಸಂಬಂಧಿಸಿದ ಅನುಚ್ಛೇದ 6.4 ಕ್ಕೆ ಸಂಬಂಧಿಸಿದಂತೆ ಸದಸ್ಯ ದೇಶಗಳ ನಡುವೆ ಯಾವುದೇ ಸಮನ್ವಯ ಇಲ್ಲದ್ದರಿಂದ ಸರ್ವಾನುಮತದ ನಿರ್ಣಯ ಕೈಗೊಳ್ಳುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಅಭಿವೃದ್ಧಿಶೀಲ ದೇಶಗಳು ಸಂಪೂರ್ಣ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದರೂ, ಪ್ಯಾರಿಸ್ ಒಪ್ಪಂದ ಸರಿಯಾದ ಹಳಿಯ ಮೇಲೆ ಸಾಗಲು ಸಮನ್ವಯದ ಕೊರತೆ ದೊಡ್ಡ ತೊಡಕಾಗಿದೆ. ಇಂಗಾಲ ಬಿಡುಗಡೆ ನಿಯಂತ್ರಿಸುವ ತಾಂತ್ರಿಕ ತಿಳಿವಳಿಕೆ ಪಡೆಯಲು ಬೇಕಾದ ದೀರ್ಘಕಾಲೀನ ಹಣಕಾಸು ಬೆಂಬಲವನ್ನು ಸದಸ್ಯ ದೇಶಗಳಿಗೆ ಒದಗಿಸಿಕೊಡುವಲ್ಲಿ ಉಂಟಾಗಿರುವ ಸಮನ್ವಯದ ನಿರ್ಧಾರದ ಕೊರತೆಯು ಪ್ಯಾರಿಸ್ ಒಪ್ಪಂದಕ್ಕೆ ದೊಡ್ಡ ತಡೆಯಾಗಿದೆ.
ಜಾಗತಿಕ ತಾಪಮಾನ ಮತ್ತು ಇಂಗಾಲ ಬಿಡುಗಡೆಗೆ ಸಂಬಂಧಿಸಿದಂತೆ ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದೆ. ಸದಸ್ಯ ದೇಶಗಳು 2020 ಕ್ಕೆ ಮುಂಚೆ ಈಡೇರಿಸಬೇಕಾಗಿದ್ದ ಭರವಸೆಗಳನ್ನೇ ಇನ್ನೂ ಬಾಕಿ ಉಳಿಸಿಕೊಂಡಿರುವಾಗ, ಅವಕ್ಕೆ ಹೊಸ ಗುರಿಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಹಾಗೂ ಅದು ಸಂಪೂರ್ಣ ವ್ಯರ್ಥ ಎಂಬ ಅಭಿಪ್ರಾಯ ಅದರದು.
ಕ್ಯೊಟೊ ಒಪ್ಪಂದದ ಕ್ರಿಯಾಯೋಜನೆಯನ್ನು ಜಾರಿಗೊಳಿಸುವ ಬದ್ಧತೆ ತೋರದೇ ಪ್ಯಾರಿಸ್ ಒಪ್ಪಂದದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಗೇಲಿ ಮಾಡಿರುವ ಭಾರತ, ಇಂಗಾಲ ಬಿಡುಗಡೆಯ ಗುರಿಗಳನ್ನು ಸಾಧಿಸಲು ಸದಸ್ಯ ದೇಶಗಳಿಗೆ 2023 ರವರೆಗೆ ಕಾಲಾವಕಾಶ ವಿಸ್ತರಿಸಬೇಕು ಎಂಬ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. ಇಂಗಾಲ ಬಿಡುಗಡೆಯನ್ನು ನಿಯಂತ್ರಿಸುವ ಮೂಲಕ ಪರಿಸರ ಮಾಲಿನ್ಯ ತಡೆಯುವಲ್ಲಿ ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭಾರತ ಮಹತ್ವದ ಪಾತ್ರವನ್ನು ವಹಿಸುತ್ತಿದೆ.
ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಅಂಗವಾಗಿ ಇಂಗಾಲ ಬಿಡುಗಡೆಯ ಪ್ರಮಾಣವನ್ನು ಭಾರತವು ಶೇಕಡಾ 21 ರಷ್ಟು ಕಡಿಮೆ ಮಾಡಿರುವುದು ಗಮನಾರ್ಹ. ಅದರ ಜೊತೆಗೆ, ಪ್ಯಾರಿಸ್ ಒಪ್ಪಂದದಂತೆ ಕ್ರಿಯಾ ಯೋಜನೆಯ ಮೂಲಕ ಇಂಗಾಲದ ಬಿಡುಗಡೆಯನ್ನು ಶೇಕಡಾ ೩೫ರಷ್ಟು ತಗ್ಗಿಸುವ ಗುರಿಯನ್ನು ಸಾಧಿಸುವಲ್ಲಿ ಮುನ್ನುಗ್ಗುತ್ತಿದೆ. ಈಗಾಗಲೇ ರೂಪಿಸಿರುವ ಇಂಗಾಲದ ಬಿಡುಗಡೆ ತಗ್ಗಿಸುವ ಗುರಿಗಳನ್ನು ಅಭಿವೃದ್ಧಿ ಹೊಂದಿರುವ ದೇಶಗಳು ನಿರ್ಲಕ್ಷ್ಯಿಸಿರುವುದಕ್ಕೆ ಕೂಡಾ ಭಾರತ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದೆ. ಇಂಗಾಲ ಬಿಡುಗಡೆಯನ್ನು ನಿಯಂತ್ರಿಸುವಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಇದೇ ರೀತಿ ನಿರ್ಲಕ್ಷ್ಯ ತೋರುವುದನ್ನು ಮುಂದುವರಿಸಿದ್ದೇ ಆದಲ್ಲಿ, ಜಗತ್ತಿನ ಸರಾಸರಿ ತಾಪಮಾನವು ಶೇಕಡಾ 3.4 ರಿಂದ ಶೇಕಡಾ 3.9ರಷ್ಟು ಏರಿಕೆಯಾಗುವುದನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಪರಿಸರ ತಜ್ಞರು ನೀಡಿದ್ದಾರೆ.
ಈಗ ಯುರೋಪ್ ಒಕ್ಕೂಟವು ದಿಢೀರನೇ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು, 2050 ರೊಳಗೆ ಶೂನ್ಯ ಬಿಡುಗಡೆಯನ್ನು ಸಾಧಿಸುವಂತಹ ಹಸಿರು ಕ್ರಾಂತಿ ಪ್ರಸ್ತಾಪವನ್ನು ಮುಂದಿಟ್ಟಿದೆ. ಹೀಗಿದ್ದಾಗ್ಯೂ, ಪ್ಯಾರಿಸ್ ಒಪ್ಪಂದ ಜಾರಿ ಮತ್ತು ಅದರ ಫಲಿತಾಂಶಗಳು,2020ರೊಳಗೆ ಇಂಗಾಲದ ಬಿಡುಗಡೆಯನ್ನು ನಿಯಂತ್ರಿಸುವ ಗುರಿ ಸಾಧಿಸುವ ಪ್ರಯತ್ನಗಳ ಮೇಲೆ ಅವಲಂಬಿತವಾಗಿವೆ.
ವಾತಾವರಣದ ಅನಿರೀಕ್ಷಿತ ಬದಲಾವಣೆಗಳಿಂದಾಗಿ ದೇಶಗಳ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂಬುದನ್ನು ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆ (ಯುನೈಟೆಡ್ ನೇಶನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್) ಬಹಿರಂಗಪಡಿಸಿದೆ. ಹೀಗಾಗಿ, ಹವಾಮಾನದ ತೀವ್ರ ಬದಲಾವಣೆಗಳು ದೇಶಗಳ ನಡುವೆ ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುತ್ತಿವೆ.
ಜಾಗತಿಕ ತಾಪಮಾನ ಏರಿಕೆ ಹಾಗೂ ತೀವ್ರ ವಿನಾಶದ ನೈಸರ್ಗಿಕ ಪ್ರಕೋಪಗಳು ರೋಗಗಳು ಹಾಗೂ ವೈರಾಣು ಜ್ವರಗಳ ಸಂಭವನೀಯ ಹರಡುವಿಕೆಗೆ ಕಾರಣವಾಗುತ್ತಿರುವುದಲ್ಲದೇ ಆಹಾರದ ಪೌಷ್ಠಿಕತೆಯ ಕೊರತೆ ಉಂಟು ಮಾಡುತ್ತಿದೆ. ಜನರ ಆಹಾರ ಮತ್ತು ಸಾಮಾಜಿಕ ಭದ್ರತೆಯಂತಹ ವಿಷಯಗಳ ಮೇಲೆಯೂ ಅದು ದೊಡ್ಡ ಸವಾಲನ್ನು ಒಡ್ಡುತ್ತಿದೆ.
ಈ ಪರಿಸ್ಥಿತಿಯಲ್ಲಿ, ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮಗಳು ಜಗತ್ತಿನಾದ್ಯಂತ ಸಂಕಷ್ಟಕ್ಕೆ ಕಾರಣವಾಗಿರುವ ಇಂಗಾಲ ಬಿಡುಗಡೆಯನ್ನು ನಿಯಂತ್ರಿಸುವ ಬದ್ಧತೆಗೆ ಒಗ್ಗಟ್ಟಾಗಿ ಕೆಲಸ ಮಾಡುವ ಸಮಯ ಬಂದಿದೆ. ವಾತಾವರಣದಲ್ಲಿ ಏನೇ ಬದಲಾವಣೆಗಳಾಗಿರಲಿ, ಶುದ್ಧ ಆಮ್ಲಜನಕವನ್ನು ಸುಧಾರಿಸುವುದು ಹಾಗೂ ಒಟ್ಟಾರೆ ಬೆಳವಣಿಗೆಯ ಗುರಿಗಳನ್ನು ಸಾಧಿಸುವುದು ಸಾಧ್ಯವಿದೆ. ವ್ಯಾಪಾರ ಮತ್ತು ಹೂಡಿಕೆ ತಂಡಗಳ ಪ್ರಯತ್ನಗಳನ್ನು ಒಗ್ಗೂಡಿಸುವ ಮೂಲಕ ಇಂಗಾಲ ಬಿಡುಗಡೆ ನಿಯಂತ್ರಣದಲ್ಲಿ ತೃಪ್ತಿಕರ ಫಲಿತಾಂಶ ಹೊಂದಬಹುದು. ಇಂಧನ ಮತ್ತು ಭೂಮಿಯ ಬಳಕೆ ವಿಧಾನಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗುಣಾತ್ಮಕ ಸುಧಾರಣೆಗಳನ್ನು ಹೊಂದುವುದು ಸಹ ಸಾಧ್ಯವಿದೆ.
ಅಭಿವೃದ್ಧಿಶೀಲ ದೇಶಗಳಿಗೆ ತಾಂತ್ರಿಕ ಜ್ಞಾನ ಮತ್ತು ಹಣಕಾಸು ಬೆಂಬಲ ಒದಗಿಸುವ ಮೂಲಕ, ಇಂಗಾಲ ಬಿಡುಗಡೆ ನಿಯಂತ್ರಣ ಕ್ರಿಯಾ ಯೋಜನೆ ಜಾರಿಗೊಳಿಸುವುದಕ್ಕೆ ಪಣ ತೊಡುವ ಮೂಲಕ, ಅಭಿವೃದ್ಧಿ ಹೊಂದಿದ ದೇಶಗಳು ನಿರ್ಧರಿತ ಗುರಿಗಳನ್ನು ಸಾಧಿಸುವುದು ಸಾಧ್ಯ. ತಮ್ಮ ಹಠಮಾರಿತನ ಧೋರಣೆ ಕೈಬಿಟ್ಟು ಸಂಘಟಿತ, ಮಿತ್ರತ್ವ ಹಾಗೂ ನಿರಂತರ ಪ್ರಯತ್ನಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಜಗತ್ತಿನ ದೇಶಗಳು ಮುಂದಾಗಬೇಕಿದೆ.
ಜಗತ್ತಿನ ದೇಶಗಳು ಒಂದು ಪಕ್ಕಾ ಕ್ರಿಯಾ ಯೋಜನೆ ಹಾಗೂ ಸೂಕ್ತ ಪ್ರಯತ್ನಗಳೊಂದಿಗೆ ಮುಂದೆ ಬಂದಿದ್ದೇ ಆದಲ್ಲಿ, ಪ್ಯಾರಿಸ್ ಒಪ್ಪಂದವನ್ನು ಜಾರಿಗೊಳಿಸುವುದು ಯಾವ ದೊಡ್ಡ ಸಮಸ್ಯೆಯೂ ಆಲ್ಲ.