ಸುದ್ದಿ ವಾಹಿನಿ ಹಾಗೂ ಮನರ೦ಜನಾ ವಾಹಿನಿಗಳ ಏರಿಳಿತವನ್ನು ಪ್ರೇಕ್ಷಕರ ವೀಕ್ಷಣೆಯ ಆಧಾರದಿ೦ದ ನಿರ್ಧರಿಸಲಾಗುತ್ತದೆ. ಈ ಮೌಲ್ಯಮಾಪನವನ್ನು ಟಿಆರ್‌ಪಿ ಎಂದು ಕರೆಯುತ್ತಾರೆ. ವಾಹಿನಿಗಳ ಮುಖ್ಯ ಉದ್ದೇಶ ಕೂಡ ಟಿ.ಆರ್.ಪಿ ಹೆಚ್ಚಿಸುವುದಾಗಿದೆ. ಕಾರಣ ಈ ಟಿಆರ್ಪಿಯಿಂದ ಅವರಿಗೆ ಜಾಹೀರಾತುಗಳನ್ನ ಪಡೆದುಕೊಳ್ಳಲು ಹಾಗೂ ಜಾಹೀರಾತಿಗೆ ಬೆಲೆ ನಿಗದಿ ಮಾಡಲು ಪ್ರಮುಖ ಮಾನದಂಡವಾಗಿದೆ.
ಟಿಆರ್ಪಿಗೆ ಸಂಬಂಧಿಸಿದಂತೆ ಇಂದು ಈ ವಿಷಯ ಹೆಚ್ಚು ಚರ್ಚೆಯಲ್ಲಿದೆ. ಕಾರಣ ಕೆಲ ಮಾಧ್ಯಮಗಳು ಟಿಆರ್‌ಪಿ ವಂಚನೆ ಮಾಡಿದ ಹಿನ್ನೆಲೆ ಪೊಲೀಸರು ನಾಲ್ವರನ್ನು ಈಗ ಬಂಧಿಸಿದ್ದಾರೆ. ರಿಪಬ್ಲಿಕ್, ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ಸೇರಿದಂತೆ ಮೂರು ಚಾನೆಲ್‌ಗಳು ಈ ಕೃತ್ಯದಲ್ಲಿ ಭಾಗಿಯಾಗಿವೆ ಎನ್ನುವ ಆರೋಪವಿದೆ.
ಇನ್ನು ಈ ವಂಚನೆ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ನಡೆದಿದ್ದವು ಎನ್ನುವುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.
ಮಧ್ಯಪ್ರದೇಶ:
2018ರಲ್ಲಿ ಗ್ವಾಲಿಯರ್‌ನಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿತ್ತು. ಮಧ್ಯಪ್ರದೇಶದಲ್ಲಿ ಟಿಆರ್‌ಪಿ ರೇಟಿಂಗ್ಅನ್ನು ಅಕ್ರಮವಾಗಿ ನಿರ್ದಿಷ್ಟ ಹಿಂದಿ ಟಿವಿ ಸುದ್ದಿ ವಾಹಿನಿಯ ಪರವಾಗಿ ನಿಗದಿಪಡಿಸಿದ್ದಕ್ಕಾಗಿ ಕೆಲವರನ್ನು ಬಂಧನ ಮಾಡಲಾಗಿತ್ತು.
ಹಲವಾರು ಮನೆಗಳಲ್ಲಿ ಟಿಆರ್‌ಪಿ [ಟೆಲಿವಿಷನ್ ರೇಟಿಂಗ್ ಪಾಯಿಂಟ್] ಮೀಟರ್‌ಗಳನ್ನು ಸ್ಥಾಪಿಸಿದ್ದರು ಮತ್ತು ನಿರ್ದಿಷ್ಟ ಹಿಂದಿ ಸುದ್ದಿ ವಾಹಿನಿಯನ್ನು ಮಾತ್ರ ವೀಕ್ಷಿಸಲು ಅವರಿಗೆ ವಿತ್ತೀಯ ಪ್ರಯೋಜನಗಳನ್ನು ನೀಡಿದ್ದರು. ಚಾನೆಲ್‌ನ ಟಿಆರ್‌ಪಿ ರೇಟಿಂಗ್‌ಗಳನ್ನು ಈ ಮೂಲಕ ಹೆಚ್ಚಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.
ಬೆಂಗಳೂರು:
ಕೆಲವು ಕಾರ್ಯಕ್ರಮಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ಅನ್ನು ಅಕ್ರಮವಾಗಿ ಹೆಚ್ಚಿಸುತ್ತಿದ್ದ ಹಿನ್ನೆಲೆ ಸೈಬರ್ ಕ್ರೈಮ್ ಪೊಲೀಸರು ಟಿವಿ ಧಾರಾವಾಹಿ ನಿರ್ಮಾಪಕ ಸೇರಿದಂತೆ ಐದು ಜನರನ್ನು ಬಂಧಿಸಿದ್ದರು. ಈ ಹಿನ್ನೆಲೆ ಜಾಹೀರಾತುದಾರರಿಗೆ ಭಾರಿ ನಷ್ಟವಾಗುವಂತೆ ಇವರು ಮಾಡಿದ್ದರು. ಟಿವಿ ಧಾರಾವಾಹಿ ನಿರ್ಮಾಪಕ ರಾಜು ಮತ್ತು ಬೆಂಗಳೂರಿನ ನಿವಾಸಿಗಳಾದ ಸುರೇಶ್, ಜೆಮ್ಸಿ ಮತ್ತು ಸುಭಾಷ್ ಮತ್ತು ಮೈಸೂರು ನಿವಾಸಿ ಮಧು ಬಂಧನಕ್ಕೊಳಗಾಗಿದ್ದ ಆರೋಪಿಗಳು.
ಈ ಗ್ಯಾಂಗ್ ತಮ್ಮ ಪರಿಚಯಸ್ಥರ ಮನೆಗಳನ್ನು ಮತ್ತು ಅವರ ಕಥಾ ವಸ್ತುವನ್ನು ಇಷ್ಟಪಡುವ ಮನೆಗಳನ್ನು ಗುರುತಿಸಿ ನಂತರ ಟಿಆರ್‌ಪಿ ಪ್ಯಾನಲ್ ಮೀಟರ್‌ಗಳನ್ನು ಸ್ಥಾಪಿಸುತ್ತಿದ್ದರು. ಅಲ್ಲದೆ, ನಿರ್ದಿಷ್ಟ ಟಿವಿಯ ಟಿಆರ್‌ಪಿ ಹೆಚ್ಚಿಸಲು ಕೆಲವರಿಗೆ ಟಿವಿಯನ್ನು ಉಚಿತವಾಗಿ ಕೂಡ ನೀಡಲಾಗಿತ್ತು. ಬ್ರಾಡ್ಕಾಸ್ಟಿಂಗ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಸಂಸ್ಥೆ ಬೆಂಗಳೂರಿನ ಹಾಂಸಾ ರಿಸರ್ಚ್ ಗ್ರೂಪ್ ಕಂಪನಿ ಮೂಲಕ ರಾಜ್ಯದಲ್ಲಿ 2,000 ಮೀಟರ್ ಸ್ಥಾಪಿಸಿದೆ. ಇವುಗಳಲ್ಲಿ ಸುಮಾರು 200 ಮೀಟರ್ ಈ ದಂಧೆ ಮಾಡುವ ಗ್ಯಾಂಗ್ನ ಪರಿಚಿತ ವೃತ್ತದ ಮನೆಯಲ್ಲಿಯೇ ಇದೆ ಎನ್ನುವ ಆರೋಪ ಕೇಳಿ ಬಂದಿತ್ತು.
![ಟಿಆರ್‌ಪಿ ರೇಟಿಂಗ್ ಹಗರಣ](https://etvbharatimages.akamaized.net/etvbharat/prod-images/9106286_hff.jpg)
ಎನ್‌ಡಿಟಿವಿ ಮೊಕದ್ದಮೆ:
ಪ್ರಸಾರಕರ ಪರವಾಗಿ ಟಿಎಎಂ ರೇಟಿಂಗ್ ಡೇಟಾವನ್ನು ಕುಶಲತೆಯಿಂದ ನಿರ್ವಹಿಸಿದ ಆರೋಪದ ಮೇಲೆ ನವದೆಹಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) ದಿ ನೀಲ್ಸನ್ ಕಂ ವಿರುದ್ಧ ಮೊಕದ್ದಮೆ ಹೂಡಿತ್ತು. ಜುಲೈ 26ರಂದು ನ್ಯೂಯಾರ್ಕ್ನ ಸುಪ್ರೀಂಕೋರ್ಟ್ನಲ್ಲಿ 194 ಪುಟಗಳ ವಿವರವಾದ ಮೊಕದ್ದಮೆ ಹೂಡಿದ ನೆಟ್ವರ್ಕ್, ರೇಟಿಂಗ್ಸ್ ಕಂಪನಿಯಿಂದ ಶತಕೋಟಿ ಡಾಲರ್ ನಷ್ಟವನ್ನು ಕೋರಿತ್ತು. ನಮ್ಮ ಚಾನೆಲ್‌ನ ನೈಜ ವೀಕ್ಷಕರನ್ನು ಮರೆಮಾಡಿ ಕಡಿಮೆ ಜನರು ವೀಕ್ಷಿಸುತ್ತಿದ್ದಾರೆ ಎಂದು ಈ ರೇಟಿಂಗ್ ಕಂಪನಿ ಮಾಹಿತಿ ನೀಡಿತ್ತು ಎಂದು ಎನ್‌ಡಿಟಿವಿ ಹೇಳಿದೆ. ನೀಲ್ಸನ್ ಮತ್ತು ಕ್ಯಾಂಟರ್ ಸಂಕೀರ್ಣವಾದ ಅಂಗಸಂಸ್ಥೆಗಳು ಹಾಗೂ ಜಂಟಿ ಉದ್ಯಮಗಳ ಮೂಲಕ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ TAM ನ ಏಕಸ್ವಾಮ್ಯದ ಶಕ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅದು ಆರೋಪಿಸಿತ್ತು.
ತೆಲಂಗಾಣ:
ಎರಡು ತೆಲುಗು ಸುದ್ದಿ ವಾಹಿನಿಗಳಿಗೆ ಅನುಕೂಲವಾಗುವಂತೆ ಬಾರ್ಕ್ ವೀಕ್ಷಕರ ಡೇಟಾವನ್ನು ಬಹಳ ನೈಪುಣ್ಯದಿಂದ ನಿರ್ವಹಿಸಿದ ಆರೋಪದ ಮೇಲೆ 04.12.2019 ರಂದು ಹೈದರಾಬಾದ್‌ನಲ್ಲಿ ಏಳು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಹೈದರಾಬಾದ್‌ನ ವೆಸ್ಟ್ ಮಾರ್ರೆಡ್‌ಪಲ್ಲಿ ಪೊಲೀಸ್ ಠಾಣೆಯಲ್ಲಿ ಬಾರ್ಕ್ ಎಫ್‌ಐಆರ್ ದಾಖಲಿಸಿದ ನಂತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಆರೋಪಿಗಳಿಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಎರಡು ಸುದ್ದಿ ವಾಹಿನಿಗಳೊಂದಿಗೆ ಸಂಪರ್ಕವಿತ್ತು.
ಬಾರ್ಕ್(BARC) ಕ್ರಮಗಳೇನು?
2018-19ರಲ್ಲಿ ಕರ್ನಾಟಕ, ಮಧ್ಯಪ್ರದೇಶ ಮತ್ತು ಅಸ್ಸೋಂನಲ್ಲಿ ಈ ದಂಧೆಯ ವಿರುದ್ಧ ಬಾರ್ಕ್ ಕಠಿಣ ಕ್ರಮ ಕೈಗೊಂಡಿದೆ. ವೀಕ್ಷಕರ ದೂರುಗಳನ್ನು ತನಿಖೆ ಮಾಡಲು ಮಾರ್ಚ್ 2017ರಲ್ಲಿ ಬಾರ್ಕ್ ಸ್ವತಂತ್ರ ಶಿಸ್ತು ಸಮಿತಿಯನ್ನು (Discomm) ರಚಿಸಿದೆ. ದುಷ್ಕೃತ್ಯಗಳ ಪುರಾವೆಗಳೊಂದಿಗೆ 18 ಪ್ರಕರಣಗಳು ಈವರೆಗೆ ದಾಖಲಾಗಿವೆ. ಇದರಲ್ಲಿ ದಕ್ಷಿಣ ಭಾರತದ 6, ತಮಿಳುನಾಡಿನಿಂದ 6, ಆಂಧ್ರ/ ತೆಲಂಗಾಣದಿಂದ 5 ಮತ್ತು ಕರ್ನಾಟಕದಿಂದ 1 ಪ್ರಕರಣ ವರದಿಯಾಗಿವೆ. ಇನ್ನು ದೇಶದ 12 ಚಾನೆಲ್‌ಗಳ ವಿರುದ್ಧ ದಂಡ ಕ್ರಮ ಕೈಗೊಳ್ಳಲಾಗಿದೆ. ತೆಲಂಗಾಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಕರ್ನಾಟಕ ಮತ್ತು ಗ್ವಾಲಿಯರ್‌ನಲ್ಲಿ ಸಂಬಂಧಿಸಿದವರನ್ನು ಬಂಧನ ಮಾಡಲಾಗಿದೆ.
ಟಿವಿ 9 ಭಾರತ್ ವರ್ಷ್ ವಿರುದ್ಧ ಎನ್‌ಬಿಎ ಆರೋಪ:
ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (ಎನ್‌ಬಿಎ), ಹಿಂದಿ ನ್ಯೂಸ್ ಚಾನೆಲ್ ಟಿವಿ 9 ಭಾರತ್ವರ್ಷ್ ವಿರುದ್ಧ ದೂರು ದಾಖಲಿಸಿದೆ. ಕಾರಣ ಕಳೆದ ಎಂಟು ವಾರಗಳಿಂದ ತನ್ನ ವೀಕ್ಷಕರ ಸಂಖ್ಯೆಯಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡುಕೊಂಡಿದೆ. ಇದು ನಕಲಿ ದತ್ತಾಂಶವನ್ನು ಆಧರಿಸಿದೆ ಎಂದು ಎನ್‌ಬಿಎ ಆರೋಪಿಸಿದೆ. ಕಳೆದ ಬುಧವಾರ ಹಿಂದಿ ಸುದ್ದಿ ಚಾನೆಲ್ ಇಂಡಿಯಾ ಟಿವಿಯ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕರಾಗಿರುವ ಹಾಗೂ ಎನ್‌ಬಿಎ ಅಧ್ಯಕ್ಷ ರಜತ್ ಶರ್ಮಾ ಅವರು ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಟಿವಿ 9 ಭಾರತ್ ವರ್ಷ್ ಮತ್ತು ಬಾರ್ಕ್ ನಡುವಿನ ಸಹಕಾರ ರೇಟಿಂಗ್ನ್ನು ಉತ್ತಮವಾಗಿಸಬಹುದು ಎಂದು ಶರ್ಮಾ ಆರೋಪಿಸಿದ್ದಾರೆ.
ಇದು ಭಾರತದಲ್ಲಿನ ಟಿವಿ ರೇಟಿಂಗ್ ಬಗೆಗಿನ ಇಲ್ಲಿಯವರೆಗಿನ ಬೆಳವಣಿಗೆ. ಜಾಹೀರಾತುಗಳನ್ನು ಪಡೆದುಕೊಂಡು ಅವರಿಗೆ ಮೋಸ ಮಾಡಿ ಈ ಮುಖಾಂತರ ದಂಧೆ ನಡೆಸುತ್ತಿದ್ದ ಅದೆಷ್ಟೋ ಟಿವಿ ಚಾನೆಲ್‌ಗಳ ವಿರುದ್ಧ ಬಾರ್ಕ್ ಕ್ರಮ ತೆಗೆದಿಕೊಂಡಿದೆ. ಹಾಗೆಯೇ ದಂಡವನ್ನು ವಿಧಿಸಿದೆ.