ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಸೇವೆಗಳನ್ನು ತ್ವರಿತವಾಗಿ ಮರುಸ್ಥಾಪಿಸುವಂತೆ ಕೋರಿ ಎನ್ಸಿ ಪಕ್ಷ ಅಧ್ಯಕ್ಷ ಹಾಗೂ ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಗುರುವಾರ ಪತ್ರ ಬರೆದಿದ್ದಾರೆ.
"ನಿಮಗೆ ತಿಳಿದಿರುವಂತೆ, ಕಾಶ್ಮೀರದಲ್ಲಿ ನಿನ್ನೆ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಇದರಿಂದಾಗಿ ಅಧಿಕಾರಿಗಳು ಕಣಿವೆಯ ಕೆಲ ಭಾಗಗಳನ್ನು ಬಂದ್ ಮಾಡಿದ್ದಾರೆ. ಇತ್ತೀಚೆಗೆ ಆರ್ಟಿಕಲ್ 370 ರದ್ಧತಿ ಬಳಿಕ ಹಾಗೂ ಕೊರೊನಾ ವೈರಸ್ ಹರಡುವ ಭೀತಿಯಿಂದ ಜನರಿಗೆ ಮನೆಯಿಂದ ಕೆಲಸ ಮಾಡಲು ಹಾಗೂ ಅಧ್ಯಯನ ಮಾಡಲು ಸೂಚಿಸಲಾಗುತ್ತಿದೆ. ಆದರೆ 2ಜಿ ಇಂಟರ್ನೆಟ್ ಸೇವೆಯ ವೇಗ ತ್ವರಿತವಾಗಿಲ್ಲದಿರುವುದರಿಂದ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 4 ಜಿ ಇಂಟರ್ನೆಟ್ ಸೇವೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸಲು ನಾನು ವಿನಂತಿಸುತ್ತೇನೆ" ಎಂದು ಪತ್ರದಲ್ಲಿ ಬರೆದಿದ್ದಾರೆ.
ಏಳು ತಿಂಗಳ ಕಾಲ ಗೃಹಬಂಧನದಲ್ಲಿದ್ದ ಫಾರೂಕ್ ಅಬ್ದುಲ್ ಬಿಡುಗಡೆಯಾದ ಬಳಿಕ ಪ್ರಧಾನಿಗೆ ಪತ್ರ ಬರೆದಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸುವುದಾಗಿ ಕೇಂದ್ರ ಘೋಷಿಸಿದ ಕೆಲವೇ ಗಂಟೆಗಳ ಮುನ್ನ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹಿತದೃಷ್ಟಿಯಿಂದ ಕಡಿಮೆ ವೇಗದ ಅಂತರ್ಜಾಲವು ಮಾರ್ಚ್ 26 ರವರೆಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಮುಂದುವರಿಯಲಿದೆ ಎಂದು ಸರ್ಕಾರ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.