ಹೈದರಾಬಾದ್(ತೆಲಂಗಾಣ): ತೀವ್ರ ಅನಾರೋಗ್ಯದಿಂದ ಬೇಸತ್ತಿದ್ದ ಒಂದೇ ಕುಟುಂಬದ ನಾಲ್ವರು ಡೆತ್ನೋಟ್ ಬರೆದಿಟ್ಟು, ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ನಲ್ಲಿ ಬುಧವಾರ ನಡೆದಿದೆ.
ವಿಕರಾಬಾದ್ ಜಿಲ್ಲೆಯ ಧರೂರ್ ಮಂಡಲದ ಡೋರ್ನಕಲ್ ಗ್ರಾಮದ ಸುವರ್ಣಭಾಯಿ (55), ಅವರ ಪುತ್ರರಾದ ಹರೀಶ್ ರಾವ್ (30), ಗಿರೀಶ್ ರಾವ್ (27), ಪುತ್ರಿ ಸ್ವಪ್ನ (23) ಹಗ್ಗದ ಕುಣಿಕೆಗೆ ಕೊರೊಳೊಡ್ಡಿದವರು.
ಎರಡು ವರ್ಷಗಳ ಹಿಂದೆ ಹೈದರಾಬಾದ್‌ಗೆ ಬಂದ ಇವರು, ಬಡಂಗ್‌ಪೇಟ್ ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ತಂಗಿದ್ದರು. ತಾಯಿಯೊಂದಿಗೆ, ಮಗಳು ಸ್ವಪ್ನಾ ಮನೆಯಲ್ಲಿದ್ದಳು. ಪುತ್ರರಾದ ಹರೀಶ್ ಮತ್ತು ಗಿರೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಗುಣಮುಖರಾಗಲು ಅನೇಕ ದೇವಸ್ಥಾನಗಳನ್ನು ಸುತ್ತಿದ್ದರು. ಅದಕ್ಕಾಗಿ ಮನೆ, ಜಮೀನು ಮತ್ತು ಚಿನ್ನಾಭರಣಗಳನ್ನು ಸಹ ಮಾರಿದ್ದರು. ಆದರೆ, ಅವರು ಗುಣಮುಖರಾಗಲಿಲ್ಲ. ಬಳಿಕ ಸಾಲದ ಪ್ರಮಾಣವೂ ಹೆಚ್ಚಾಯಿತು. ಹೀಗಾಗಿ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ದಾರಿ ಹಿಡಿದರು. ತಾವು ಆತ್ಮಹತ್ಯೆ ಮಾಡಿಕೊಂಡಿದ್ದೇವೆ. ನಮ್ಮ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಬೇಡಿ. ನೇರವಾಗಿ ಅಂತ್ಯಕ್ರಿಯೆ ನಡೆಸಿ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
'ಬಾಗಿಲು ತೆರೆಯಿರಿ'
ಒಂದು ಹಾಳೆಯಲ್ಲಿ 'ಬಾಗಿಲು ತೆರೆಯಿರಿ' (ಡೋರ್ ತೆರವಂಡಿ) ಎಂದು ಮನೆಯ ಕಿಟಕಿಯೊಂದಕ್ಕೆ ಅಂಟಿಸಿದ್ದರು. ಇದನ್ನು ಪಕ್ಕದ ಮನೆಯವರು ಗಮಿನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಮನೆಯ ಬಾಗಿಲು ತೆರೆದಾಗ ಮತ್ತೊಂದು ಹಾಳೆಯಲ್ಲಿ 'ಈ ಪತ್ರ ಓದಿ' (ಈ ಲೆಟರ್ ಚದವಂಡಿ) ಎಂದು ಬರೆದಿದ್ದರು. ಅದನ್ನು ಓದಿದಾಗ ಅವರೆಲ್ಲ ಆತ್ಮಹತ್ಯೆ ಮಾಡಿಕೊಂಡಿರುದು ತಿಳಿದಿದೆ. ಹಾಗೆಯೇ ಪೊಲೀಸರು ಒಳಹೊಕ್ಕಾಗ, ಬೆಡ್ರೂಮ್ನ ಮಂಚದ ಮೇಲೆ ಸುವರ್ಣಭಾಯಿ, ಮಂಚದ ಕೆಳಗೆ ಸ್ವಪ್ನ, ಗಿರೀಶ್ ರಾವ್ ಮೃತದೇಹಗಳಿದ್ದವು. ಹರೀಶ್ರಾವ್ ಮೃತದೇಹ ನೇತಾಡುತ್ತಿತ್ತು.
ಮೊದಲು ಸುವರ್ಣಭಾಯಿ, ಸ್ವಪ್ನ, ಗಿರೀಶ್ ನೇಣಿಗೆ ಶರಣಾಗಿದ್ದಾರೆ. ಅವರ ಮೃತದೇಹಗಳನ್ನು ಬೆಡ್ರೂಮ್ಗೆ ತಂದು ಹಾಕಿ ನಂತರ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.