ನವದೆಹಲಿ: ಆರು ರೈಲ್ವೆ ವಿಭಾಗಗಳ ಸುಮಾರು 250 ನಿಲ್ದಾಣಗಳಲ್ಲಿ ಜನಸಮೂಹ ನಿಯಂತ್ರಿಸುವ ಸಲುವಾಗಿ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು 50 ರೂ.ಗೆ ಹೆಚ್ಚಿಸಲಾಗಿದೆ.
ಕೊವಿಡ್-19ನಿಂದಾಗಿ ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರ ಸಂಖ್ಯೆ ಇಳಿಸಲು ಹಾಗೂ ಜನಸಮೂಹ ನಿಯಂತ್ರಿಸಲು ಹೊಸ ಪ್ಲಾನ್ ಮಾಡಿರುವ ರೈಲ್ವೆ ಅಧಿಕಾರಿಗಳು, ಮುಂಬೈ, ವಡೋದರಾ, ಅಹಮದಾಬಾದ್, ರತ್ನಂ, ರಾಜ್‌ಕೋಟ್, ಭಾವನಗರ ವಿಭಾಗಗಳಲ್ಲಿನ 250 ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಮುಂದಿನ ಆದೇಶದವರೆಗೆ ಹೆಚ್ಚಿಸಿದ್ದಾರೆ.
ಹವಾನಿಯಂತ್ರಿತ ಬೋಗಿಗಳಿಂದ ಪರದೆ ಮತ್ತು ಕಂಬಳಿಗಳನ್ನು ತೆಗೆದು ಹಾಕುವಂತೆ ಭಾರತೀಯ ರೈಲ್ವೆ ಸಲಹೆ ನೀಡಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಸಲಹೆ ನೀಡಿದ್ದು, ರೈಲ್ವೆ ವಲಯಗಳಲ್ಲಿ ಅಡುಗೆ ವಿಭಾಗದಲ್ಲಿರುವ (ಆಹಾರ ನಿರ್ವಹಣೆ) ಸಿಬ್ಬಂದಿಗೆ ಜ್ವರ, ಕೆಮ್ಮು ಇದ್ದರೆ ಅಂತವರಿಗೆ ಕಾರ್ಯ ನಿರ್ವಹಿಸದಂತೆ ಸೂಚಿಸಿದೆ.