ನವದೆಹಲಿ: ದೇಶಾದ್ಯಂತ ಲಾಕ್ಡೌನ್ ಆದೇಶ ಹೊರ ಹಾಕಿರುವುದರಿಂದ ಎಲ್ಲರೂ ಮನೆಯಲ್ಲೇ ಜೀವನ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ವೇಳೆ, ಕೌಟುಂಬಿಕ ಹಿಂಸಾಚಾರದಂತಹ ಪ್ರಕರಣ ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ವಕ್ತಾರೆ ರೇಖಾ ಶರ್ಮಾ, ದೇಶದಲ್ಲಿ ಲಾಕ್ಡೌನ್ ಆದೇಶ ಹೊರಹಾಕಿದಾಗಿನಿಂದಲೂ ಬೇರೆ ಬೇರೆ ರೀತಿಯ ಪ್ರಕರಣ ದಾಖಲಾಗುತ್ತಿದ್ದು, ಗಂಡ ಹಿಂಸೆ ನೀಡುವುದು, ನಿಂದನೆ ಮಾಡುವುದು ಇದರ ಜತೆಗೆ ಕೋವಿಡ್-19 ಎಂದು ಕರೆಯುವಂತಹ ಪ್ರಕರಣ ಬೆಳಕಿಗೆ ಬಂದಿವೆ ಎಂದು ತಿಳಿಸಿದ್ದಾರೆ.
ಮಾರ್ಚ್ 24ರಿಂದ ಏಪ್ರಿಲ್ 1ರವರೆಗೆ 69 ಕೌಟುಂಬಿಕ ಪ್ರಕರಣ ದಾಖಲಾಗಿದ್ದು, ದಿನಕಳೆದಂತೆ ಇವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದಿದ್ದಾರೆ. ಪ್ರತಿದಿನ ಒಂದಲ್ಲಾ ಒಂದು ಇ-ಮೇಲ್ ನನಗೆ ಬರುತ್ತಿವೆ. ನಮ್ಮ ಸಿಬ್ಬಂದಿಗಳಿಗೂ ಪ್ರಕರಣ ಬರುತ್ತಿವೆ ಎಂದಿದ್ದಾರೆ.
ಸದ್ಯ ಮನೆಯಲ್ಲಿರುವ ಮಹಿಳೆಯರುವ ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಅವರು ತವರು ಮನೆಗೆ ಹೋಗಲು ಕೂಡ ಆಗುತ್ತಿಲ್ಲ. ಹೀಗಾಗಿ ಗಂಡನಿಂದ ಅಥವಾ ಮನೆಯಲ್ಲಿರುವ ಇತರ ಸದಸ್ಯರಿಂದ ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.