ನವದೆಹಲಿ : ದೆಹಲಿಯಲ್ಲಿ ಕೊರೊನಾ ಪ್ರಕರಣಗಳಲ್ಲಿ ನಿರಂತರ ಏರಿಕೆಯ ಬಗ್ಗೆ ಆರೋಗ್ಯ ತಜ್ಞರು ಬಹಳ ಕಾಳಜಿ ವಹಿಸಿದ್ದಾರೆ. ಅವರ ಕಾಳಜಿಗೆ ಕಾರಣ ಕೊರೊನಾ ವೈರಸ್ ಮಾತ್ರವಲ್ಲ, ಮಾಲಿನ್ಯದ ಸಮಸ್ಯೆಯೂ ಆಗಿದೆ.
ದೆಹಲಿಯಲ್ಲಿ ಜನರು ಉಸಿರಾಡಲು ಸಹ ಕಷ್ಟಪಡುವ ಪರಿಸ್ಥಿತ ಎದುರಾಗಿದೆ. ದೆಹಲಿಯಲ್ಲಿನ ಅಪಾಯಕಾರಿ ಮಾಲಿನ್ಯದಿಂದಾಗಿ, ದೆಹಲಿ ವೈದ್ಯಕೀಯ ವೇದಿಕೆ ಸುದ್ದಿಗೋಷ್ಠಿ ನಡೆಸಿ ದೆಹಲಿಯ ಭಯಾನಕ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದೆ. ದೆಹಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ದೆಹಲಿ ಈ ಬಾರಿ ಅಪಾಯಕಾರಿ ಮಾಲಿನ್ಯ ಹಾಗೂ ಕೊರೊನಾ ವೈರಸ್ ದಾಳಿಯನ್ನು ಎದುರಿಸುತ್ತಿದೆ ಎಂದು ದೆಹಲಿ ವೈದ್ಯಕೀಯ ವೇದಿಕೆಯ ಕನ್ವೀನರ್ ಮತ್ತು ದೆಹಲಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಬಿ ಬಿ ವಾಧ್ವಾ ಹೇಳಿದರು.
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿದಿನ ಸುಮಾರು 7000 ಹೊಸ ಪ್ರಕರಣ ವರದಿಯಾಗುತ್ತಿವೆ. ದೆಹಲಿಯ ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಗಾಳಿಯು ವಿಷಕಾರಿಯಾಗಿದೆ.
ಇಲ್ಲಿ ಮಾಲಿನ್ಯದಿಂದ ಜನರು ಉಸಿರಾಡಲು ಸಹ ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿ ಜನರಿಗೆ ಇದು ಅತ್ಯಂತ ಸಂಕಷ್ಟದ ಪರಿಸ್ಥಿತಿ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ದೆಹಲಿ ವೈದ್ಯಕೀಯ ಆಯೋಗದ ಚುನಾಯಿತ ಸದಸ್ಯ ಡಾ.ಹರೀಶ್ ಗುಪ್ತಾ ಹೇಳಿದ್ದಾರೆ.
ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ದೆಹಲಿ ಯಾವಾಗಲೂ ಮುಂದಿದೆ. ದೆಹಲಿ ಸರ್ಕಾರವು ಕೊರೊನಾವನ್ನು ನಿಯಂತ್ರಿಸುವುದರ ಜೊತೆಗೆ ದೆಹಲಿಯ ಗಾಳಿಯನ್ನು ಸಹ ಸ್ವಚ್ಛಗೊಳಿಸಬೇಕಾಗುತ್ತದೆ.
ಆಗ ಮಾತ್ರ ದೆಹಲಿ ಜನರಿಗೆ ಆರೋಗ್ಯಕರ ಜೀವನವನ್ನು ಒದಗಿಸಬಹುದು. ಇದನ್ನು ನಿಭಾಯಿಸಲು ದೆಹಲಿ ಸರ್ಕಾರವು ಐಟಿಒ ಬಳಿ ಹೊಗೆ ಗೋಪುರವನ್ನು ಸ್ಥಾಪಿಸಿದೆ. ಹೊಗೆ ಗೋಪುರಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಹಸಿರು ದೆಹಲಿಯನ್ನು ರಚಿಸಲು ಕಾರ್ಯಪಡೆಯೊಂದನ್ನು ರಚಿಸಬೇಕಾಗಿದೆ.