ಫರೂಖಾಬಾದ್ (ಉತ್ತರ ಪ್ರದೇಶ): ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದ್ದು, ಜೂನ್. 8 ರಿಂದ ಎಲ್ಲ ದೇವಾಲಯಗಳು ಬಾಗಿಲು ತೆರೆಯಲು ಅವಕಾಶ ನೀಡಿದೆ. ಆದ್ರೆ ಧಾರ್ಮಿಕ ಆಚರಣೆಯಲ್ಲಿ ಗುಂಪಾಗಿ ಸೇರುವುದನ್ನು ನಿಷೇಧಿಸಿದೆ. ಹೀಗಿದ್ರೂ ಉತ್ತರ ಪ್ರದೇಶದ ಫರೂಖಾಬಾದ್ನ ಜನರು ಸೋಮವಾರ ಬೆಳಗ್ಗೆ ಗಂಗಾ ದಸರಾ ಉತ್ಸವವನ್ನು ಆಚರಿಸಲು ಗುಂಪಾಗಿ ಸೇರಿದ್ದರು.
ಧಾರ್ಮಿಕ ಸಭೆಗಳಲ್ಲಿ ಜನರು ಸೇರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಮಾಡಿದ್ರೂ, ಭಕ್ತರು ಪಂಚಲ್ ಘಾಟ್ ಮತ್ತು ಧೈ ಘಾಟ್ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿರುವ ದೃಶ್ಯ ಕಂಡುಬಂತು. ಸಣ್ಣ ಪುಟ್ಟ ಅಂಗಡಿಗಳಲ್ಲಿ ಹೂ ಮತ್ತು ಪೂಜಾ ವಸ್ತುಗಳನ್ನು ಕೂಡ ಮಾರಾಟ ಮಾಡಲಾಗುತ್ತಿತ್ತು.
ನಿಯಮ ಪಾಲನೆ: ಪೊಲೀಸರ ಸಮರ್ಥನೆ
ಈ ಸ್ಥಳದಲ್ಲಿ ನಾಲ್ಕು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ ಮತ್ತು ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಪಡೆಯನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವಾಗ ಜನರು ಸಾಮಾಜಿಕ ಅಂತರವನ್ನು ಅನುಸರಿಸುತ್ತಾರೆ ಎಂದು ಪೊಲೀಸ್ ಅಧಿಕಾರಿ ಮನ್ನಿ ಲಾಲ್ ಗೌರ್ ಹೇಳಿದ್ರು.
ಗಂಗಾ ದಸರಾ ಹಬ್ಬದಂದು ಗಂಗೆಯಲ್ಲಿ ಸ್ನಾನ ಮಾಡುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಕಾರಣ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಈ ದಿನ ಗಂಗಾ ಮಾತೆ ಸ್ವರ್ಗದಿಂದ ಭೂಮಿಗೆ ಬರುತ್ತಾಳೆ ಎಂದು ಜನರು ನಂಬುತ್ತಾರೆ. ಗಂಗಾ ದಸರಾ ಉತ್ಸವವನ್ನು ಪ್ರತಿವರ್ಷ ಜೂನ್ 1 ರಂದು ಆಚರಿಸಲಾಗುತ್ತಿತ್ತು.
ಗಂಗಾ ದಸರಾ ಉತ್ಸವವನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಜನರು ಗಂಗಾ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಆರತಿ ಮಾಡುತ್ತಾರೆ. ಪ್ರಾರ್ಥನೆಯ ಭಾಗವಾಗಿ ಭಕ್ತರು ಹಣ್ಣು, ಮಣ್ಣಿನ ಮಡಕೆಗಳನ್ನು ದಾನ ಮಾಡುತ್ತಾರೆ.