ನವದೆಹಲಿ: ಪಾಕಿಸ್ತಾನದಲ್ಲಿ ಇನ್ನೊಬ್ಬ ಸಿಖ್ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆ ದೆಹಲಿಯ ಪಾಕಿಸ್ತಾನದ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸುವುದಾಗಿ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ. ವಿದೇಶಾಂಗ ಸಚಿವಾಲಯಕ್ಕೂ ಈ ವಿಷಯವನ್ನು ಕೊಂಡೊಯ್ಯುತ್ತೇವೆ ಎಂದು ಅವರು ಹೇಳಿದ್ದಾರೆ.
ಗುರುದ್ವಾರ ಪಂಜಾ ಸಾಹಿಬ್‌ನ ಗ್ರಂಥಿ ಪ್ರತಿತಂ ಸಿಂಗ್ ಅವರ ಪುತ್ರಿ ಅಪಹರಣಕ್ಕೊಳಗಾದ ಘಟನೆ ಪಾಕಿಸ್ತಾನದಿಂದ ವರದಿಯಾಗಿದೆ. ಅವರು ತಮ್ಮ ಮಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸುವ ಭಯದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮಗಳು ಕಾಣೆಯಾಗಿದ್ದಾಳೆ ಎಂದು ಪ್ರತಿತಂ ಸಿಂಗ್ ಸಹಾಯಕ್ಕಾಗಿ ಕೋರಿದ್ದಾರೆ.
"ಪಾಕಿಸ್ತಾನದಲ್ಲಿ ಸಿಖ್ಖರನ್ನು ಹಿಂಸಿಸಲಾಗುತ್ತಿದೆ, ಅವರು ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಬಾಲಕಿಯರನ್ನು ಅಪಹರಿಸಿ ನಂತರ ಮುಸ್ಲಿಂ ಪುರುಷನನ್ನು ಮದುವೆಯಾಗುವಂತೆ ಒತ್ತಾಯಿಸಲಾಗುತ್ತಿದೆ. ಇದು ಖಂಡನೀಯವಾಗಿದ್ದು, ಅಲ್ಲಿನ ಪ್ರಜಾಪ್ರಭುತ್ವದ ಪವಿತ್ರತೆಯನ್ನು ಪ್ರತಿಬಿಂಬಿಸುತ್ತದೆ. ಈ ವಿಷಯದಲ್ಲಿ ಪಾಕಿಸ್ತಾನ ಸಚಿವರು ನಾಚಿಕೆಪಡಬೇಕು" ಎಂದು ಡಿಎಸ್‌ಜಿಎಂಸಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದರು.