ನವದೆಹಲಿ: ದೇಶದಲ್ಲಿ ಮಂಗಳವಾರ 63,509 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 72,39,389 ಆಗಿದೆ. ಗುಣಮುಖರ 63 ಲಕ್ಷ ದಾಟಿದ್ದು, ಶೇ. 87.05 ರಷ್ಟು ಜನರು ಸೋಂಕು ಮುಕ್ತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 730 ಜನ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,10,586 ಆಗಿದೆ. ಕಳೆದ ಆರು ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 9 ಲಕ್ಷಕ್ಕಿಂತ ಕೆಳಗಿದೆ.
ಪ್ರಸ್ತುತ 8,26,876 ಅಂದರೆ, ಶೇ. 11.42 ರಷ್ಟು ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟು 63,01,927 ಜನ ಸೋಂಕು ಮುಕ್ತರಾಗಿದ್ದಾರೆ. ಶೇ. 1.53 ರಷ್ಟು ಜನ ಮೃತಪಟ್ಟಿದ್ದಾರೆ.
ದೇಶದಲ್ಲಿ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ ಮತ್ತು ಸೆಪ್ಟೆಂಬರ್ 5 ರಂದು 40 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಸೆಪ್ಟೆಂಬರ್ 16 ರಂದು 50 ಲಕ್ಷ, ಸೆಪ್ಟೆಂಬರ್ 28 ರಂದು 60 ಲಕ್ಷ ಮತ್ತು ಅಕ್ಟೋಬರ್ 11 ರಂದು 70 ಲಕ್ಷ ದಾಟಿದೆ.
ಐಸಿಎಂಆರ್ ಪ್ರಕಾರ, ಅಕ್ಟೋಬರ್ 13 ರವರೆಗೆ ಒಟ್ಟು 9,00,90,122 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಮಂಗಳವಾರ 11,45,015 ಮಾದರಿಗಳನ್ನು ಪರೀಕ್ಷಿಸಲಾಗಿದೆ.