ನವದೆಹಲಿ: ಸದ್ಯಕ್ಕಿರುವ ಕೊರೊನಾ ಸಂಕಷ್ಟವನ್ನು ದೇಶ ಸ್ವಾವಲಂಬಿಯಾಗುವ ಅಸ್ತ್ರವನ್ನಾಗಿ ಪರಿವರ್ತಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಭಾರತೀಯ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕ ಅಧಿವೇಶನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಮೋದಿ, ಭಾರತದ ಪ್ರತಿಯೊಬ್ಬ ನಾಗರಿಕನೂ ಕೊರೊನಾ ಸಂಕಷ್ಟದ ಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಕೊರೊನಾ ಅನ್ನು ದೇಶಕ್ಕೆ ಪ್ರಮುಖ ತಿರುವನ್ನಾಗಿ ಸೃಷ್ಟಿಸಿಕೊಳ್ಳಬೇಕು. ಇದರಿಂದ ಸ್ವಾವಲಂಬನೆ ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಇದಕ್ಕಾಗಿ ನಾವು ಮಾಡಬೇಕಾದ ಕೆಲಸವೆಂದರೆ ಭಾರತದಲ್ಲಿ ಉತ್ಪಾದನೆ ಹೆಚ್ಚಿಸುವುದು. ಭಾರತೀಯರು ಉತ್ಪಾದಿಸಿದ ಉತ್ಪನ್ನಗಳಿಗೆ ನಾವೇ ಗ್ರಾಹಕರಾಗುವುದು. ನಮ್ಮ ದೇಶದ ಉತ್ಪನ್ನಗಳಿಗೆ ಬೇರೆ ರಾಷ್ಟ್ರಗಳಲ್ಲಿ ಮಾರುಕಟ್ಟೆ ಕಲ್ಪಿಸುವುದರ ಮೂಲಕ ಸ್ವಾವಲಂಬನೆ ಸಾಧಿಸಬಹುದು ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಜೊತೆಗೆ ವಿಶ್ವವಾಣಿಜ್ಯ ಮಂಡಳಿಯ ಕಾರ್ಯವನ್ನು ಶ್ಲಾಘಿಸುತ್ತಾ, ಐಸಿಸಿ ಪಶ್ಚಿಮ ಭಾರತ, ಈಶಾನ್ಯ ಭಾರತದ ಉತ್ಪಾದನಾ ವಲಯಕ್ಕೆ ಸಾಕಷ್ಟು ಕೊಡುಗೆ ನೀಡಿದೆ. 1925ರಿಂದ ಐಸಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಜೊತೆಗೆ ಈಶಾನ್ಯ ಭಾರತ ಸಾವಯವ ಕೃಷಿ ಕೇಂದ್ರವಾಗಬೇಕೆಂದು ಆಶಿಸಿದ ಮೋದಿ ಈ ಭಾಗದಲ್ಲಿ ಬಿದಿರು ಹಾಗೂ ಸಾವಯವ ಕ್ಲಸ್ಟರ್ ತೆರೆಯುವ ಭರವಸೆ ನೀಡಿದರು. ಇದರ ಜೊತೆಗೆ ಪಶ್ಚಿಮ ಬಂಗಾಳವನ್ನು ಕೂಡಾ ಹೊಗಳಿದರು.