ನವದೆಹಲಿ: ಕರ್ನಾಟಕ ಮತ್ತು ಗೋವಾದ ರಾಜಕೀಯ ಬೆಳವಣಿಗೆಗಳಿಗೆ ಕೇಂದ್ರದ ಆಡಳಿತರೂಢ ಬಿಜೆಪಿ ಸರ್ಕಾರ ಕಾರಣ ಆರೋಪಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರು, ಸಂಸದರು, ರಾಜ್ಯಸಭೆ ಸದಸ್ಯರು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಆಡಳಿತಾರೂಢ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವವನ್ನು ಬಿಜೆಪಿ ಕೊಲ್ಲುತ್ತಿದ್ದು, ಪ್ರಜಾತಂತ್ರ ವ್ಯವಸ್ಥೆಗೆ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಟಿಎಂಸಿ, ಎಸ್ಪಿ, ಎನ್ಸಿಪಿ, ಆರ್ಜೆಡಿ, ಸಿಪಿಐನ (ಎಂ) ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಧಿಕಾರದ ದಾಹಕ್ಕಾಗಿ ಬಿಜೆಪಿ ನಾಯಕರು ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕರ ರಾಜೀನಾಮೆ ಹಾಗೂ ಗೋವಾದಲ್ಲಿ ಬಿಜೆಪಿಯಲ್ಲಿ ವಿಲೀನ ಆಗುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ಯುಪಿಎ ಚೇರ್ ಪರ್ಸನ್ ಸೋನಿಯಾ ಗಾಂಧಿ ರಾಜ್ಯಸಭೆ ಹಾಗೂ ಲೋಕಸಭಾ ಕಾಂಗ್ರೆಸ್ ಸದಸ್ಯರ ಜತೆ ಕಲಾಪ ಆರಂಭಕ್ಕೂ ಮುನ್ನವೇ ಚರ್ಚೆ ನಡೆಸಿದ್ಧರು. ಅಷ್ಟೇ ಅಲ್ಲದೆ, ಕಲಾಪದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಿದ್ದರು.
ಅಂತೆಯೇ ಈ ವಿಷಯ ಉಭಯ ಸದನಗಳಲ್ಲಿ ಸದ್ದು ಮಾಡಿತು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕರು ಕರ್ನಾಟಕ ಗೋವಾ ವಿಷಯ ಪ್ರಸ್ತಾಪಿಸಿ ವಾಕ್ ಔಟ್ ಕೂಡಾ ನಡೆಸಿದರು. ಲೋಕಸಭೆಯಲ್ಲೂ ವಿಷಯ ಪ್ರಸ್ತಾಪ ಆಯಿತು