ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ಆಗಿರುವ ಹಿನ್ನೆಲೆ, ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಲು ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಪ್ರದೇಶ, ಜಿಲ್ಲಾ ಮತ್ತು ಬ್ಲಾಕ್ ಘಟಕಗಳಿಗೆ ತಿಳಿಸಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಬೇಕೆಂದು ಸೂಚಿಸಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಯಾವುದೇ ಸಭೆ ನಡೆಸದಂತೆ ಕೋರಲಾಗಿದೆ. ಅಗತ್ಯ ವಸ್ತುಗಳ ವಿತರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸೂಚಿಸಲಾಗಿದೆ.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಅಂಬೇಡ್ಕರ್ ಜಯಂತಿಯನ್ನು ತಮ್ಮ ಮನೆಗಳಲ್ಲಿ ಆಚರಿಸಲು ಕೇಳಿಕೊಳ್ಳಲಾಗಿದೆ.
"ಬಾಬಾಸಾಹೇಬರ ಜನ್ಮದಿನದಂದು, ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದಂತೆ, ಬಡವರಿಗೆ ಮತ್ತು ದೀನ ದಲಿತರಿಗೆ ಸಹಾಯ ಮಾಡಿ" ಎಂದು ವೇಣುಗೋಪಾಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.