ನವದೆಹಲಿ: ಉತ್ತರ ಪ್ರದೇಶದಲ್ಲಿ ಪದೇ ಪದೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದನ್ನು ಖಂಡಿಸಿರುವ ಕಾಂಗ್ರೆಸ್, ಸರ್ಕಾರವನ್ನು ತಕ್ಷಣ ವಜಾಗೊಳಿಸುವಂತೆ ಆಗ್ರಹಿಸಿದೆ.
ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆದ ಘಟನೆಯ ಸುಮಾರು ಒಂದು ತಿಂಗಳ ನಂತರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಆಕೆಯ ಸ್ವಂತ ಸೋದರ ಸಂಬಂಧಿಯೇ ಅತ್ಯಾಚಾರ ಎಸಗಿದ ಮತ್ತೊಂದು ಘಟನೆ ವರದಿಯಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಅಪರಾಧಿಗಳಿಗೆ ಬಲವಾದ ಸಂದೇಶವನ್ನು ಕಳುಹಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರವನ್ನು ತಕ್ಷಣ ವಜಾಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿಯ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ದೂಷಿಸಿದೆ.
"ಕೇಂದ್ರ ಏನು ಮಾಡುತ್ತಿದೆ? ಗೃಹ ಸಚಿವಾಲಯ ಏನು ಮಾಡುತ್ತಿದೆ? ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಅವರೇನು ತಮ್ಮ ಕಣ್ಣು ಮತ್ತು ಕಿವಿ ಮುಚ್ಚಿಕೊಂಡು ಕೂತಿದ್ದಾರೆಯೇ" ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಅಪರಾಧ ಬ್ಯೂರೋದ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್, 2019ರಲ್ಲಿ 59,853 ಘಟನೆಗಳೊಂದಿಗೆ ಉತ್ತರ ಪ್ರದೇಶ ಮಹಿಳೆಯರ ಮೇಲಿನ ಅಪರಾಧಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದರು.