ಚಾಮರಾಜನಗರ: ಬಾಳೆ ಬೆಳೆದ ರೈತನ ಬದುಕು ‘ಬಂಗಾರ’ ಎಂಬ ಮಾತು ಸದ್ಯದ ಪರಿಸ್ಥಿತಿಗೆ ಅನ್ವಯವಾಗುತ್ತಿಲ್ಲ. ಕಾರಣ, ಮಾರುಕಟ್ಟೆಯಲ್ಲಿ ಬಾಳೆಗೆ ಬೇಡಿಕೆ ಹಾಗೂ ದರ ಕುಸಿದಿದೆ. ಬಾಳೆ ಕೊಳ್ಳುವವರಿಲ್ಲದೇ ಜಮೀನಿನಲ್ಲಿ ಹಣ್ಣಾಗುವ ಸ್ಥಿತಿ ತಲುಪುತ್ತಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಸರಾ, ದೀಪಾವಳಿ ಹಬ್ಬದ ವೇಳೆ ಬಾಳೆಗೆ ಉತ್ತಮ ದರ ಇತ್ತು, ಬೇಡಿಕೆಯೂ ಹೆಚ್ಚಾಗಿತ್ತು. ಕೆ.ಜಿ ಏಲಕ್ಕಿ ಬಾಳೆ ಮಾರುಕಟ್ಟೆಯಲ್ಲಿ 60 ರಿಂದ 80 ರೂ ತಲುಪಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಸದ್ಯ ಬೆಲೆ ದಿಢೀರ್ ಕುಸಿತವಾಗಿ ಕೆ.ಜಿ ಏಲಕ್ಕಿ ಬಾಳೆಗೆ 15 ರೂ ದರ ಇದೆ. ಪಚ್ಚಬಾಳೆಯ ದರವೂ ಇಳಿಕೆಯಾಗಿದೆ. ಕೆ.ಜಿಗೆ 10ರಿಂದ ಗರಿಷ್ಠ 15ರ ದರದಲ್ಲಿ ಖರೀದಿ ನಡೆಯುತ್ತಿದ್ದು, ವ್ಯಾಪಾರಿಗಳ ಕೊರತೆ ಎದುರಾಗಿದೆ.
ಈ ಬಾರಿ ಹೆಚ್ಚು ಬಾಳೆ ಬೆಳೆದಿರುವುದು ಹಾಗೂ ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಬಾಳೆ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವುದು ದರ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಸ್ಥಳೀಯವಾಗಿ ಮಾತ್ರವಲ್ಲದೇ ಬೇರೆ ಜಿಲ್ಲೆಗಳ ಮಾರುಕಟ್ಟೆಗಳಲ್ಲಿಯೂ ಬಾಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 3,500 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಾಳೆ ಬೆಳೆದಿದ್ದಾರೆ.
ಮಧ್ಯವರ್ತಿಗಳಿಗೆ ಲಾಭ: ರೈತರಿಂದ ನೇರವಾಗಿ ಖರೀದಿಸುವ ವ್ಯಾಪಾರಸ್ಥರು ಬಾಳೆ ಮಂಡಿಗಳಲ್ಲಿ ಕೆಜಿಗೆ 60 ರಿಂದ 70 ರೂ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ತಳ್ಳುವ ಗಾಡಿ ವ್ಯಾಪಾರಸ್ಥರು, ಅಂಗಡಿಗಳಲ್ಲಿಯೂ ಇದೆ ದರದಲ್ಲಿ ಮಾರಾಟವಾಗುತ್ತಿದೆ. ಕೆ.ಜಿ ಬಾಳೆ ಮಾರಾಟದ ಮೇಲೆ ಕನಿಷ್ಠ 30 ರಿಂದ 40ರವರೆಗೆ ಲಾಭ ಪಡೆಯುತ್ತಿದ್ದಾರೆ. ಆದರೆ, ವರ್ಷವಿಡೀ ಕಷ್ಟಪಟ್ಟು ಬಾಳೆ ಬೆಳೆದ ರೈತ ಮಾತ್ರ ನಷ್ಟದಲ್ಲಿ ಬದುಕು ಸವೆಸುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ಬಾಳೆ ಗಿಡ ಗೊನೆ ಬಿಡಲು 12 ತಿಂಗಳು ಬೇಕು. ಬೆಳೆದ ಬೆಳೆಗೆ ಬೆಲೆ ಕುಸಿತವಾದರೆ ಒಂದು ವರ್ಷದಿಂದ ಕಾದಿದ್ದಕ್ಕೂ ಪ್ರಯೋಜನ ಇಲ್ಲದಂತಾಗುತ್ತದೆ. ಬಾಳೆ ಬೆಳೆಯಲು ಖರ್ಚು ಮಾಡಿರುವ ಹಣವೂ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ರೈತ ಮುಖಂಡ ಭಾಗ್ಯರಾಜ್ ಮಾತನಾಡಿ, "ಮಧ್ಯವರ್ತಿಗಳ ಹಾವಳಿ, ಸರ್ಕಾರದಿಂದ ತಜ್ಞರ ಸಮಿತಿ ಇಲ್ಲದ ಪರಿಣಾಮ ಏಲಕ್ಕಿ ಬಾಳೆ ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು, ಏಕಾಏಕಿ ಬೆಲೆ ಕುಸಿತಕ್ಕೆ ಕಾರಣ ಕಂಡುಕೊಳ್ಳಬೇಕು. ಸ್ಥಿರ ಬೆಲೆ ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು. ನಂಜನಗೂಡು ರಸಬಾಳೆಗೆ ಪ್ರೋತ್ಸಾಹ ಸಿಗದೇ ಹೇಗೆ ಕಣ್ಮರೆಯಾಯಿತೋ, ಏಲಕ್ಕಿ ಬಾಳೆಗೂ ಅದೇ ಸ್ಥಿತಿ ಬರಲಿದೆ. ಸೂಕ್ತ ಮಾನದಂಡದ ಮೂಲಕ ಬಾಳೆ ಬೆಲೆ ನಿಗದಿ ಮಾಡಬೇಕು. ಹಾಪ್ ಕಾಮ್ಸ್ಗಳಿಗೆ ಮಾರ್ಗದರ್ಶನ ನೀಡಬೇಕು" ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನೆಲಮಂಗಲ: ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಮಹಿಳೆ ಕೊಂದ ಚಿರತೆ ಸೆರೆ