ರುದ್ರಪ್ರಯಾಗ್ (ಉತ್ತರಾಖಂಡ್): ಜಿಲ್ಲೆಯ ಸಿರ್ವಾಡಿ ಗ್ರಾಮದಲ್ಲಿ ತಡರಾತ್ರಿ ಮೇಘಸ್ಪೋಟ ಉಂಟಾಗಿದ್ದು, ಹಲವಾರು ಮನೆಗಳು ಹಾನಿಗೊಂಡಿವೆ. ಅನೇಕ ಮನೆಗಳ ಮೇಲೆ ಭಾರೀ ಗಾತ್ರದ ಬಂಡೆಗಳು ಉರುಳಿ ಬಿದ್ದಿವೆ.
ಹೊಲಗಳು, ಕೊಟ್ಟಿಗೆಗಳು ಮತ್ತು ರಸ್ತೆ ಮಾರ್ಗಗಳು ಕೂಡಾ ಹಾನಿಗೊಳಗಾಗಿವೆ. ರಾತ್ರಿ ಹೊತ್ತಿನಲ್ಲಿ ಗ್ರಾಮಸ್ಥರು ತಮ್ಮ ಮನೆಗಳನ್ನು ಖಾಲಿ ಮಾಡಿದ್ದಾರೆ. ಮಾಹಿತಿ ಪಡೆದ ಸ್ಥಳೀಯಾಡಳಿತದ ತಂಡಗಳು ಸ್ಥಳಕ್ಕೆ ತಲುಪಿದೆ.
ಗ್ರಾಮವನ್ನು ಸಂಪರ್ಕಿಸುವ ಪಾದಚಾರಿ ಮಾರ್ಗಗಳು ಹಾನಿಗೊಂಡಿವೆ. ಈ ಕಾರಣದಿಂದಾಗಿ ಸಾವಿರಾರು ಜನ ಗ್ರಾಮದಲ್ಲಿಯೇ ಸಿಲುಕಿಕೊಂಡಿದ್ದಾರೆ.
1986ರಲ್ಲಿ ಇದೇ ಹಳ್ಳಿಯಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಇದರಲ್ಲಿ 17 ಜನರು ಹಾಗೂ 100ಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿದ್ದವು. ಅಂದಿನ ಉತ್ತರ ಪ್ರದೇಶ ಸರ್ಕಾರ ಕೂಡ ಭೂವೈಜ್ಞಾನಿಕ ಸಮೀಕ್ಷೆ ನಡೆಸಿತ್ತು. ಅದರ ನಂತರ ವಿಜ್ಞಾನಿಗಳು ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂದು ಹೇಳಿದ್ದರು, ಆದರೆ ಇಲ್ಲಿಯವರೆಗೆ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಂಡಿಲ್ಲ.