ಪಾಲ್ಫರ್ (ಮಹಾರಾಷ್ಟ್ರ): ಹಥ್ರಾಸ್ ಘಟನೆಯನ್ನ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಜಟಾಪಟಿ ನಡೆದಿರುವ ಘಟನೆ ಪಾಲ್ಫರ್ನ ವಾಸೈನಲ್ಲಿ ನಡೆದಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ವೇಳೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು, ತಾ ಮುಂದು ನಾ ಮುಂದು ಎಂದು ಮಾತಾಡೋಕೆ ಶುರು ಮಾಡಿದ್ದಾರೆ. ಈ ವೇಳೆ ಪ್ರತಿಷ್ಠೆಯ ಜಿದ್ದಿಗೆ ಬಿದ್ದ ನಾಯಕರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪ್ರತಿಭಟನೆಯಲ್ಲಿ ಹಿಡಿಯಲು ತಂದಿದ್ದ ಬ್ಯಾನರ್ಗಳನ್ನೇ ಹರಿದು ರಂಪಾಟ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ವಾಘ್ಮೋರೆ ಮತ್ತು ಕಾರ್ಯದರ್ಶಿ ಮಣಿಯಾರ್ ನಡುವೆ ಈ ಗಲಾಟೆ ನಡೆದಿದೆ ಎನ್ನಲಾಗ್ತಿದೆ.
ಗಲಾಟೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಯಕರ ಈ ನಡೆಗೆ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.