ರಾಯ್ಪುರ : ಮಹತ್ವಾಕಾಂಕ್ಷೆಯ 'ಸೂರಜಿ ಗಾಂವ್ ಯೋಜನೆ' ಸೇರಿ ಛತ್ತೀಸ್‌ಗಢ ಸರ್ಕಾರದ ಎಲ್ಲಾ ಪ್ರಮುಖ ಯೋಜನೆಗಳ ವಿವರಗಳನ್ನು ಹೊಂದಿರುವ 'ಮುಖ್ಯಮಂತ್ರಿ ದರ್ಪಣ್ ಮೊಬೈಲ್ ಆ್ಯಪ್'ಗೆ ರಾಷ್ಟ್ರ ಮಟ್ಟದಲ್ಲಿ "ಎಲೈಟ್ಸ್ ಎಕ್ಸ್‌ಲೆನ್ಸ್ ಅವಾರ್ಡ್ಸ್ -2020" ನೀಡಿ ಗೌರವಿಸಲಾಗಿದೆ.
'ಡಿಜಿಟಲ್ ಇಂಡಿಯಾ ಕಾರ್ಯಕ್ರಮ'ದಡಿ ಛತ್ತೀಸ್‌ಗಢ ರಾಜ್ಯಕ್ಕೆ ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಎಲೈಟ್ಸ್ ಟೆಕ್ನೋ ಮೀಡಿಯಾ ಈ ಗೌರವವನ್ನು ನೀಡಿದೆ. ಜುಲೈ 10 ರಿಂದ 12ರವರೆಗೆ ದೇಶದಲ್ಲಿ ಮೂರು ದಿನಗಳ ವರ್ಚುವಲ್ ಸಮ್ಮೇಳನ ಆಯೋಜಿಸಲಾಗಿದೆ. ಈ ವರ್ಚುವಲ್ ಸಮ್ಮೇಳನವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ದೆಹಲಿಯಲ್ಲಿ ಜುಲೈ 10ರಂದು ಉದ್ಘಾಟಿಸಿದ್ದಾರೆ. ಜೊತೆಗೆ ಈ ಸಂದರ್ಭದಲ್ಲಿ ಛತ್ತೀಸ್ಗಢ್ಗೆ ಇ-ಪ್ರಮಾಣ ಪತ್ರ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡನ್ನೂ ಛತ್ತೀಸ್ಗಢದ ಇನ್ಫೋಟೆಕ್ ಪ್ರಮೋಷನ್ ಸೊಸೈಟಿ (ಚಿಪ್ಸ್) ಅಭಿವೃದ್ಧಿಪಡಿಸಿದೆ. ಇದನ್ನು ಕಳೆದ ಜೂನ್ 10ರಂದು ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಬಿಡುಗಡೆ ಮಾಡಿದರು.
ಈ ಮೊಬೈಲ್ ಅಪ್ಲಿಕೇಶನ್‌ನ ಪ್ರಮುಖ ಉದ್ದೇಶವೆಂದ್ರೆ ಸರ್ಕಾರದ ಪ್ರಮುಖ ಯೋಜನೆಗಳನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಿಂದ ನೇರವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಸಾಮಾನ್ಯ ನಾಗರಿಕರಿಗೆ ನೈಜ ಸಮಯದಲ್ಲಿ ಮಾಹಿತಿ ಒದಗಿಸುವುದು.