ಚಂಡೀಗಢ: ಈ ಹಿಂದೆ ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿಯನ್ನು ಜನರ ಮೇಲೆ ಹೇರಿದಂತೆಯೇ ಈಗ ರೈತರ ಮೇಲೆ ಕೃಷಿ ಕಾನೂನನ್ನು ಹೇರಲು ಪ್ರಯತ್ನಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎನ್‌ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹರಿಹಾಯ್ದಿದ್ದಾರೆ.
ಚಂಡೀಗಢದಲ್ಲಿ ಮಾತನಾಡಿದ ಅವರು, ರೈತರೇ ಈ ಕೃಷಿ ಕಾನೂನು ಬೇಡ ಎನ್ನುತ್ತಿರುವಾಗ ನೀವೇಕೆ ಅದನ್ನು ಜಾರಿಗೆ ತರಲು ಹೊರಟಿದ್ದೀರಿ?, ಪ್ರತಿಭಟನಾನಿರತ ರೈತರನ್ನು "ರಾಷ್ಟ್ರ ವಿರೋಧಿ" ಎಂದು ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಬಾದಲ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಮೊದಲು ನೋಟು ಅಮಾನ್ಯೀಕರಣ ಮತ್ತು ಜಿಎಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ನೀತಿಯನ್ನು ಬಲವಂತವಾಗಿ ಹೇರಲಾಯ್ತು. ಈಗ ಕೃಷಿ ಕಾಯ್ದೆಗಳನ್ನು ಬಲವಂತವಾಗಿ ಜಾರಿಗೆ ತರಲು ಹೊರಟಿದ್ದಾರೆ ಎಂದು ಅವರು ಕಿಡಿ ಕಾರಿದರು.
ಇದು ಪ್ರಜಾಪ್ರಭುತ್ವ ರಾಷ್ಟ್ರ. ರೈತರು ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ, ದೇಶಾದ್ಯಂತ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಭಾರತ್ ಬಂದ್ ಆಚರಿಸಿ, ಪ್ರತಿಭಟನೆ ನಡೆಸುತ್ತಿರುವುದನ್ನು ನೀವೇ ನೋಡುತ್ತಿದ್ದೀರಿ. ರೈತರೇ ಈ ನೂತನ ಕಾನೂನುಗಳನ್ನು ಬಯಸುತ್ತಿಲ್ಲ ಅಂದ ಮೇಲೆ ಸರ್ಕಾರ ಏಕೆ ಅವನ್ನು ಜಾರಿಗೊಳಿಸಲು ಬಯಸುತ್ತಿದೆ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ಎಸ್‌ಎಡಿ ಮುಖ್ಯಸ್ಥ ಹೇಳಿದ್ದಾರೆ.
ಪ್ರಜೆಗಳನ್ನು ಎದುರು ಹಾಕಿಕೊಳ್ಳಲು ಮತ್ತು ಅವರ ಧ್ವನಿಯನ್ನು ನಿಗ್ರಹಿಸಲು ಹೊರಟಿರುವ ಸರ್ಕಾರದ ಮನೋಭಾವವನ್ನು ಇದು ಎತ್ತಿ ತೋರಿಸುತ್ತಿದೆ. ನೀವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರದೇ ಧ್ವನಿ ನಿಗ್ರಹಿಸಲು ಸಾಧ್ಯವಿಲ್ಲ ಎಂದು ಅವರು ಕಿವಿಮಾತು ಹೇಳಿದರು.
ಕೇಂದ್ರವು ರೈತರನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ಕೆಟ್ಟ ನಡೆ. ಅವರು ರಾಷ್ಟ್ರ ವಿರೋಧಿಗಳು ಎಂದು ನೀವು ಹೇಳುವುದಾದರೆ ಅವರೊಂದಿಗೆ ನೀವು ಏಕೆ ಸಭೆ ನಡೆಸಿದ್ರಿ? ಎಂದು ಪ್ರಶ್ನಿಸಿದ ಅವರು, ನಿಮ್ಮ ಸಭೆ ವಿಫಲವಾಗಿದೆ, ಹೀಗಾಗಿ ನೀವು ಅವರನ್ನು ರಾಷ್ಟ್ರ ವಿರೋಧಿ ಎಂದು ಕರೆದಿದ್ದೀರಿ" ಅಂತಾ ಟೀಕಿಸಿದರು. ಇದೇ ವೇಳೆ ರೈತರು ರಾಷ್ಟ್ರ ವಿರೋಧಿಗಳಲ್ಲ ಎಂದು ಹೇಳಿದರು.
ರೈತರನ್ನು "ಉಗ್ರಗಾಮಿಗಳು" ಮತ್ತು "ಖಲಿಸ್ತಾನಿಗಳು" ಎಂದು ತೋರಿಸಲಾಗುತ್ತಿದೆ. ಅವರು ನಿರ್ದಿಷ್ಟ ಧರ್ಮದೊಂದಿಗೆ ಸಂಬಂಧ ಹೊಂದಿದ್ದಾರೆಂದು ಬಿಂಬಿಸಲಾಗ್ತಿದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ದುರ್ಬಲಗೊಳಿಸುವ ಅಥವಾ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದನ್ನೂ ಮಾಡಬೇಡಿ ಎಂದು ಇದೇ ವೇಳೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥರು ಮನವಿ ಮಾಡಿದರು.
ಓದಿ: ಫೈಝರ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಅಮೆರಿಕದ ಎಫ್ಡಿಎ