ನವದೆಹಲಿ: ದೇಶಾದ್ಯಂತ ಹಲವಡೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಕಾಯ್ದೆಗಳ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಎರಡು ಕೃಷಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಮೇಲ್ಮನೆಯಲ್ಲಿ ಮಂಡಿಸಲಾಗಿದೆ.
ಈ ಹಿಂದೆ ಈ ಕೃಷಿ ಸಂಬಂಧಿತ ಖಾತೆಗಳನ್ನು ಕೆಳಮನೆ ಅಂದರೆ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಅಲ್ಲಿ ಅಂಗೀಕಾರಗೊಂಡ ನಂತರ ಈಗ ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ತೋಮರ್ "ಎರಡು ಮಸೂದೆಗಳು ಐತಿಹಾಸಿಕವಾಗಿದ್ದು, ರೈತರ ಜೀವನದಲ್ಲಿ ಬದಲಾವಣೆಯನ್ನು ತರುತ್ತವೆ. ಅವರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮುಕ್ತವಾಗಿ ವ್ಯಾಪಾರ ಮಾಡಲು ಈ ಮಸೂದೆಗಳು ಅವಕಾಶ ಒದಗಿಸಿಕೊಡುತ್ತವೆ '' ಎಂದು ಭರವಸೆ ನೀಡಿದ್ದಾರೆ.
ಇದರ ಜೊತೆಗೆ ಈಗ ಮಂಡಿಸಿರುವ ಮಸೂದೆಗಳು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ಕಾಯ್ದೆಗಳಲ್ಲ ಎಂದು ನರೇಂದ್ರ ಸಿಂಗ್ ತೋಮರ್ ಈ ವೇಳೆ ಸ್ಪಷ್ಟನೆ ನೀಡಿದ್ದಾರೆ.
ರೈತ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆಯು ಕೃಷಿ ಉತ್ಪನ್ನಗಳ ನೇರ ಆನ್ಲೈನ್ ಖರೀದಿ ಹಾಗೂ ಮಾರಾಟಕ್ಕೆ ಅನುಕೂಲವಾಗುವ ವ್ಯವಸ್ಥೆಯನ್ನು ರೂಪಿಸುತ್ತದೆ.
ಇದರ ಜೊತೆಗೆ ಮಂಡನೆಯಾಗಿರುವ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಅಡಿಯಲ್ಲಿ ಬರುವ ರೈತರ ಸಬಲೀಕರಣ ಮತ್ತು ಸಂರಕ್ಷಣೆ ಮಸೂದೆಯು ಕೃಷಿ ಉತ್ಪಾದನೆಗೆ ಮೊದಲು ಬೆಲೆ ಖಾತರಿಯ ಭರವಸೆ ನೀಡುತ್ತದೆ.