ನವದೆಹಲಿ: ಮುಂದಿನ ತಿಂಗಳಿಂದ ದೇಶದಲ್ಲಿ ಅನ್ಲಾಕ್ 4.0 ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಸಾರ್ವಜನಿಕರಿಗೆ ಮತ್ತಷ್ಟು ಸಡಲಿಕೆ ಜತೆಗೆ ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ದಟ್ಟವಾಗಿದೆ.
ಅನ್ಲಾಕ್ 4.0 ಜಾರಿಗೊಳಿಸಲು ಕೇಂದ್ರ ಗೃಹ ಇಲಾಖೆ ಇದೀಗ ಯೋಜನೆ ರೂಪಿಸಿಕೊಳ್ಳುತ್ತಿದ್ದು, ಅದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ಮಾಹಿತಿ ಪಡೆದುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆಲವೊಂದು ರಾಜ್ಯಗಳು ಮೆಟ್ರೋ ಆರಂಭ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೇ ವಿಚಾರವಾಗಿ ಪತ್ರ ಸಹ ಬರೆದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳೊಂದಿಗೆ ಮಾತನಾಡಿ ಇದಕ್ಕೆ ಅನುಮತಿ ನೀಡಬಹುದು ಎಂದು ತಿಳಿದು ಬಂದಿದೆ. ಆದರೆ ಕೆಲವೊಂದು ಮಹತ್ವದ ನಿಯಮ ಇದಕ್ಕಾಗಿ ಜಾರಿಗೊಳಿಸುವ ಸಾಧ್ಯತೆ ಇದೆ.
ಸೆಪ್ಟೆಂಬರ್ನಿಂದ ಶಾಲಾ-ಕಾಲೇಜು ಆರಂಭಗೊಳ್ಳಲಿವೆ ಎಂಬ ಮಾತು ಕೇಳಿ ಬರುತ್ತಿದ್ದು, ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಶಾಲಾ ಮಕ್ಕಳು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕೆಲವೊಂದು ಮಹತ್ವದ ನಿಯಮಗಳೊಂದಿಗೆ ಕೇಂದ್ರ ಸರ್ಕಾರ ರೀ ಓಪನ್ ಮಾಡಲು ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಸಿನಿಮಾ ಹಾಲ್, ಪಾರ್ಕ್, ಸಾರ್ವಜನಿಕ ಸ್ಥಳಗಳು ಓಪನ್ ಆಗುವುದು ಡೌಟ್ ಎನ್ನಲಾಗಿದೆ. ದೇಶದಲ್ಲಿ ಈಗಾಗಲೇ ಅನ್ಲಾಕ್ 3.0 ಜಾರಿಯಲ್ಲಿದ್ದು, ಯೋಗಾ ಕೇಂದ್ರ, ಜಿಮ್ ಆರಂಭಗೊಂಡಿವೆ.