ಆಗ್ರಾ: ಮಹಿಳೆಗೆ ಕೊರೊನಾ ಸೋಂಕು ತಗುಲಿರುವ ವಿಷಯವನ್ನು ಮರೆಮಾಚಿದ್ದಕ್ಕಾಗಿ ರೋಗಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಆಗ್ರಾ ಜಿಲ್ಲಾಡಳಿತ ಪ್ರಕರಣ ದಾಖಲಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಆಗ್ರ ಮೂಲದ ಗೂಗಲ್ ಉದ್ಯೋಗಿ ಹಾಗೂ ಆತನ ಪತ್ನಿ ಹನಿಮೂನ್ಗೆಂದು ಇಟಲಿಗೆ ತೆರಳಿ ಬಂದಿದ್ದರು. ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಪತಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಪತಿಗೆ ಕೊವಿಡ್-19 ಇರುವುದು ತಿಳಿಯುತ್ತಿದ್ದಂತೆಯೇ ಪತ್ನಿ ಬೆಂಗಳೂರಿನಿಂದ ತಮ್ಮ ಪೋಷಕರೊಂದಿಗೆ ಆಗ್ರಾಕ್ಕೆ ಬಂದಿದ್ದರು. ಈಕೆಗೂ ಕೂಡ ಸೋಂಕು ತಗುಲಿರಬಹುದು ಎಂದು ಶಂಕಿಸಿ ಇವರ ಮನೆಗೆ ಆರೋಗ್ಯ ಇಲಾಖೆ ಸದಸ್ಯರ ತಂಡ ಭೇಟಿ ನೀಡಿದ ವೇಳೆ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ವಿಷಯವನ್ನು ಮರೆಮಾಚಿದ್ದರು. ಆದರೆ ನಿನ್ನೆ ಆಗ್ರಾದ ಆಸ್ಪತ್ರೆಯಲ್ಲಿ ಈಕೆಗೂ ಸೋಂಕು ಇರುವುದು ದೃಢಪಟ್ಟಿತ್ತು.
ಹೀಗಾಗಿ ಸೆಕ್ಷನ್ 269 ಹಾಗೂ 270ರ ಅಡಿ ಆಗ್ರಾದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.