ಹೈದರಾಬಾದ್ : ಪ್ರಪಂಚದಾದ್ಯಂತ ಕೊರೊನಾ ವೈರಸ್ ಅಟ್ಟಹಾಸವಿದೆ. ಅಮೆರಿಕ ದೇಶವೊಂದರಲ್ಲೇ ವಿಶ್ವದ ಅತೀ ಹೆಚ್ಚು 1.2 ಕೋಟಿಗಿಂತಲೂ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿವೆ. ಸುಮಾರು 17 ಲಕ್ಷ ಪ್ರಕರಣ ದಾಖಲಾಗುವ ಮೂಲಕ ಬ್ರೆಝಿಲ್ ನಂತರದ ಸ್ಥಾನದಲ್ಲಿದೆ. ಭಾರತ 3 ನೇ ಸ್ಥಾನದಲ್ಲಿದೆ. ಈವರೆಗೆ ಸುಮಾರು 8 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.
ಕೊರೊನಾ ಪ್ರಕರಣ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ 'ಕೊರೊನಾದೊಂದಿಗಿನ ಹೋರಾಟ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಶತಮಾನದ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟನ್ನು ನಿವಾರಿಸುವ ದೃಷ್ಟಿಯಿಂದ 'ಸಾರ್ವಜನಿಕ ಸಿದ್ಧತೆ' ಬೆರಗುಗೊಳಿಸುತ್ತದೆ.
ಕೊರೊನಾ ವೈರಸ್ ಸೀನುವಿಕೆ ಮತ್ತು ಕೆಮ್ಮಿನಿಂದ ಮಾತ್ರ ಇತರರಿಗೆ ಹರಡುತ್ತದೆ ಎಂದು ಇದುವರೆಗೂ ಹೇಳಲಾಗುತ್ತಿತ್ತು. ಆದರೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಲಾಲಾರಸದ ಹನಿಗಳ ಮೂಲಕ ಕೂಡ ವೈರಸ್ ಹರಡುವ ಅಪಾಯವನ್ನು ಗುರುತಿಸಿದೆ. ಪರಸ್ಪರ ಮಾತನಾಡುವಾಗ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಹೀಗಾದರೆ, ವೈರಸ್ ಗಾಳಿಯ ಮೂಲಕ ಹರಡಿದಂತೆಯೂ ಆಗುತ್ತದೆ.
ಕೆಮ್ಮುವಾಗ ಮತ್ತು ಸೀನುವಾಗ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಹೇರಲಾಗಿತ್ತು. ಧಾರ್ಮಿಕ ಕೇಂದ್ರಗಳು, ಚಿತ್ರಮಂದಿರಗಳು, ವಸ್ತು ಸಂಗ್ರಹಾಲಯಗಳು, ಜಿಮ್ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲು ಇದು ಮುಖ್ಯ ಕಾರಣ. ಆದರೆ, ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ಜನ ಮುನ್ನೆಚ್ಚರಿಕಾ ಕ್ರಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಆರಂಭದಲ್ಲಿ ಜನ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಿದ್ದರು. ಆದರೆ, ಇತ್ತೀಚೆಗೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದ್ರೂ ಜನ ಕೇಳುತ್ತಿಲ್ಲ. ಇದು ಒಂದು ರೀತಿ ಕಳವಳಕಾರಿ ಸಂಗತಿ.
ಜನರು ರಸ್ತೆಗಳಲ್ಲಿ ಬೇಕಾ ಬಿಟ್ಟಿ ಓಡಾಟ ನಡೆಸುವುದು, ಮಾಸ್ಕ್ ಧರಿಸದೆ ಇರುವುದು ರೋಗ ಹರಡಲು ಮುಖ್ಯ ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ವೈರಸ್ ಹರಡುವಿಕೆಯ ಪ್ರಭಾವ ಇನ್ನೂ ಹೆಚ್ಚಾಗಬಹುದು. ಆದ್ದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಸ್ವಯಂ ಮತ್ತು ಸಾಮಾಜಿಕ ಸುರಕ್ಷತೆ ಕಾಪಾಡಲು ಮತ್ತು ಪರಸ್ಪರ ಅವಲಂಬನೆಯನ್ನು ಗೌರವಿಸಲು ಜಾಗರೂಕ ಸಾರ್ವಜನಿಕರು ಸಿದ್ಧರಾಗಿರಬೇಕು.
ಕೊರೊನಾ ಮಹಾ ಯುದ್ಧದಲ್ಲಿ ನಾಗರಿಕರು ನಿರ್ಣಾಯಕ ಶಕ್ತಿಗಳೆಂದು ಪ್ರಧಾನಮಂತ್ರಿಗಳು ಹೇಳಿದಂತೆ, ಸೋಂಕು ನಿಯಂತ್ರಣವು ತಳ ಮಟ್ಟದ ಜನರ ಆಲೋಚನೆಗಳ ಮೇಲೆ ನಿಂತಿದೆ. 'ಒಬ್ಬ ವ್ಯಕ್ತಿ ಮುಕ್ತವಾಗಿ ಸುತ್ತಾಡಿದ ಕಾರಣ ಏನೂ ಆಗುವುದಿಲ್ಲ, ನನ್ನೊಬ್ಬನಿಂದ ಏನೂ ಸಂಭವಿಸುವುದಿಲ್ಲ' ಎಂಬ ಈ ರೀತಿಯ ಉದಾಸೀನತೆಯು ಸಾರ್ವಜನಿಕರ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಉಂಟು ಮಾಡುತ್ತದೆ.
ಫೇಸ್ ಮಾಸ್ಕ್ ಧರಿಸದೆ ಸಿಕ್ಕಿಬಿದ್ದವರಿಂದ ಈವರೆಗೆ ಒಡಿಶಾ ಪೊಲೀಸರು ದಂಡ ರೂಪದಲ್ಲಿ 1.25 ಕೋಟಿ ರೂ. ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಕೋವಿಡ್ ರೂಲ್ ಉಲ್ಲಂಘಿಸುವವರಿಂದ ದಂಡ ರೂಪದಲ್ಲಿ 1 ಕೋಟಿ ರೂ. ಸಂಗ್ರಹಿಸಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ 14 ದಿನಗಳ ಲಾಕ್‌ಡೌನ್ ವಿಧಿಸಲಾಗುವುದು ಎಂದು ಆಗ್ರಾ ಜಿಲ್ಲಾಡಳಿತ ಇತ್ತೀಚೆಗೆ ಎಚ್ಚರಿಸಿದೆ. ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಸಾರ್ವಜನಿಕವಾಗಿ ಉಗುಳುವವರಿಗೆ ಮತ್ತು ಮಾಸ್ಕ್ ಧರಿಸದವರಿಗೆ ಹತ್ತು ಸಾವಿರ ರೂಪಾಯಿ ದಂಡ ಹಾಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಹೊಸ ನಿಯಮ ಜಾರಿಗೆ ತಂದಿದೆ.
ಮಾಸ್ಕ್ ಧರಿಸದಕ್ಕಾಗಿ ಮತ್ತು ನಿಯಮ ಉಲ್ಲಂಘಿಸಿದಕ್ಕಾಗಿ ನಡು ರಸ್ತೆಯಲ್ಲಿ ಪೊಲೀಸರು ತಡೆದು ದಂಡ ವಿಧಿಸುವುದು ಒಂದು ರೀತಿ ಅವಮಾನಕರ ಸಂಗತಿ. ಜನರು ಬೇರೊಬ್ಬರ ಹೊರತು ಸ್ವಯಂ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳದಿರುವುದು ತೊಂದರೆಯನ್ನು ಆಹ್ವಾನಿಸಿದಂತೆ. ನಾಗರಿಕ ಸಮಾಜವು ತನ್ನದೇ ಆದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧವಾದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಿತಿಗಳನ್ನು ಅರಿತುಕೊಂಡಾಗ, ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ, ಕೊರೊನಾ ವಿರುದ್ಧ ನಿಜವಾದ ಯುದ್ಧದಲ್ಲಿ ಯಶಸ್ವಿಯಾಗಿ ಹೋರಾಡಲು ಸಾಧ್ಯವಾಗುತ್ತದೆ.
ಜನರ ಪ್ರಮುಖ ಭಾಗವಹಿಸುವಿಕೆ ಇಲ್ಲದೆ, ಸಾಂಕ್ರಾಮಿಕ ರೋಗದ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಶಿಕ್ಷಿತ ಸೈನಿಕನಾಗಿ ನಿರ್ಣಾಯಕ ಪಾತ್ರವಹಿಸಲು ಪ್ರತಿ ನಾಗರಿಕನೂ ಸಿದ್ಧನಾಗಿರಬೇಕು. ಫೇಸ್ ಮಾಸ್ಕ್ ಧರಿಸುವುದು, ಕೈತೊಳೆಯುವುದುನ್ನು ಅಭ್ಯಾಸವನ್ನಾಗಿ ಮಾಡುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು. ಇತ್ಯಾದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ನಮ್ಮ ಗೆಳೆಯರು, ಸುತ್ತಮುತ್ತಲಿನವರಲ್ಲಿ ಜಾಗೃತಿ ಮೂಡಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಗತ್ಯ. ಈ ರೀತಿಯಾಗಿ, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಬಲವಾದ ಸಾಮಾಜಿಕ ಆಂದೋಲನ ರೂಪಿಸಲು ನಾವು ಪರಸ್ಪರ ಸಹಾಯ ಮಾಡಬಹುದು ಮತ್ತು ಈ ಬಿಕ್ಕಟ್ಟಿನಿಂದ ಯಶಸ್ವಿಯಾಗಿ ಹೊರ ಬರಬಹುದು.