ನವದೆಹಲಿ: ಮದುವೆ ಸಂಭ್ರಮದ ಮೆರವಣಿಗೆ ವೇಳೆ ವರನ ಕಡೆಯವರು ಖುಷಿಯಲ್ಲಿ ಹಾರಿಸಿದ ಗುಂಡು ಬಾಲಕನ ಜೀವಕ್ಕೆ ಆಪತ್ತು ತಂದಿದೆ. ದೆಹಲಿಯ ರೋಹಿಣಿ ಏರಿಯಾದಲ್ಲಿ ಈ ಘಟನೆ ನಡೆದಿದೆ.
ಮದುವೆ ಮನೆಯವರು ಸಂಭ್ರಮದಲ್ಲಿ ಮಾಡಿದ ಫೈರಿಂಗ್ನಿಂದ ಬುಲೆಟ್ ತಾಗಿ 12 ವರ್ಷದ ಬಾಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಆತನನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸಾಗಿಸಲಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮದುವೆ ಮೆರವಣಿಗೆ ನೋಡಲು ಬಾಲ್ಕನಿಯಲ್ಲಿ ನಿಂತಿದ್ದ ಬಾಲಕ :
ಶನಿವಾರ ರಾತ್ರಿ 9ರ ಸುಮಾರಿಗೆ ರಸ್ತೆಯಲ್ಲಿ ಅದ್ಧೂರಿಯಾಗಿ ಮದುವೆ ಮೆರವಣಿಗೆ ಸಾಗುತ್ತಿತ್ತು. ಬಾಲಕ, ತನ್ನ ಮನೆಯ ಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಮೆರವಣಿಗೆ ನೋಡುತ್ತಿದ್ದ. ಆಗ ಮದುವೆ ಕಡೆಯವರು ತಮ್ಮ ಸಂಪ್ರದಾಯದಂತೆ ಮೆರವಣಿಗೆ ವೇಳೆ ಖುಷಿಯ ಪ್ರತೀಕವಾಗಿ ಗಾಳಿಯಲ್ಲಿ ಫೈರಿಂಗ್ ಮಾಡಿದ್ದಾರೆ. ದುರಾದೃಷ್ಟವೋ ಏನೋ ಗುಂಡು ಮೆರವಣಿಗೆ ನೋಡುತ್ತಿದ್ದ ಬಾಲಕನ ತಲೆಗೆ ಹೊಡೆದಿದೆ. ಇದರಿಂದ ಬಾಲಕ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಫೈರಿಂಗ್ ಮಾಡಿದ ವ್ಯಕ್ತಿ ಪತ್ತೆಗೆ ಬಲೆ ಬೀಸಿದ್ದಾರೆ.