ನವದೆಹಲಿ: ಕೋವಿಡ್-19 ಲಾಕ್‌ಡೌನ್‌ನಂತೆ ಉಭಯ ಸದನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲಾ ಸಂಸದರಿಗೂ ಆಸನದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಗಳು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಮುಂಗಾರು ಅಧಿವೇಶನ ನಡೆಸಲು ರಾಜ್ಯಸಭೆಯ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಲವು ದಿನಗಳಿಂದ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ.
ಇಂದು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸಿರುವ ಉಭಯ ಸದನಗಳ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಆಯ್ಕೆಗಳನ್ನು ರಾಜ್ಯಸಭೆಯ ಸಭಾಪತಿ ಮತ್ತು ಸ್ಪೀಕರ್ ಅವರ ಮುಂದಿಟ್ಟಿದ್ದಾರೆ.
ಲೋಕಸಭೆ, ರಾಜ್ಯಸಭೆ, ಸಂಸತ್‌ನ ಸೆಂಟ್ರಲ್ ಹಾಲ್ ಮತ್ತು ವಿಜ್ಞಾನ್ ಭವನದ ಪ್ಲೆನರಿ ಹಾಲ್‌ಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಹೊಸ ಮಾರ್ಗ ಸೂಚಿಗಳ ಪ್ರಕಾರ ರಾಜ್ಯಸಭೆಯಲ್ಲಿ ಕೇವಲ 60 ಮಂದಿಗೆ ಮಾತ್ರ ಆಸನಗಳ ವ್ಯವಸ್ಥೆ ಮಾಡಬಹುದು. ಲೋಕಸಭೆ ಚೇಂಬರ್ ಮತ್ತು ಸೆಂಟ್ರಲ್ ಹಾಲ್‌ನಲ್ಲಿ 100 ಮಂದಿ ಕುಳಿತುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಗ್ಯಾಲರಿಯಲ್ಲೂ ಆಸನಗಳ ವ್ಯವಸ್ಥೆ ಮಾಡಿದರೆ ಅಗತ್ಯ ಇರುವ ಆಸನಗಳ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಬಹುದು. ವಿಜ್ಞಾನ್ ಭವನದಲ್ಲಿರುವ ಪ್ಲೆನರಿ ಹಾಲ್‌ನಲ್ಲೂ ಲೋಕಸಭೆಯ ಎಲ್ಲಾ ಸಂಸದರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಸನಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಇಬ್ಬರು ಹಿರಿಯ ಅಧಿಕಾರಿಗಳು ಎಂ.ವೆಂಕಯ್ಯ ನಾಯ್ಡು ಹಾಗೂ ಓಂ ಬಿರ್ಲಾ ಅವರಿಗೆ ಮನವರಿಕೆ ಮಾಡಿದ್ದಾರೆ.