ಗಾಜಿಯಾಬಾದ್ (ಉತ್ತರಪ್ರದೇಶ): ಈದ್ ಹಬ್ಬದಂದು ಮುಸ್ಲಿಮರು ಪ್ರಾಣಿಗಳ ಬದಲಿಗೆ ತಮ್ಮ ಮಕ್ಕಳನ್ನು ಬಲಿ ನೀಡಲಿ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.
'ಗಾಜಿಯಾಬಾದ್‌ನ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜಾರ್ ಈ ಹೇಳಿಕೆ ನೀಡಿದ್ದು, ಮಾಂಸದಿಂದ ಕೊರೊನಾ ವೈರಸ್ ಹರಡುತ್ತದೆ. ಆದ್ದರಿಂದ ಜನರು ಮುಗ್ದ ಪ್ರಾಣಿಗಳನ್ನು ಬಲಿ ನೀಡಬಾರದು. ಒಂದು ವೇಳೆ ಈದ್ ಹಬ್ಬಕ್ಕಾಗಿ ಏನಾದರೂ ಬಲಿ ಕೊಡಬೇಕೆಂದು ಅನ್ನಿಸಿದರೆ ತಮ್ಮ ಮಕ್ಕಳನ್ನು ಬಳಕೆ ಮಾಡಿಕೊಳ್ಳಲಿ' ಎಂದಿದ್ದಾರೆ.
'ನನ್ನ ಕ್ಷೇತ್ರದ ಜನರು ಮಾಂಸ ಮತ್ತು ಮದ್ಯ ಸೇವನೆ ಮಾಡಲು ನಾನು ಬಿಡುವುದಿಲ್ಲ. ಕೊರೊನಾ ವೈರಸ್ ಹರಡುವುದರಿಂದ ಜನರು ಮುಗ್ದ ಪ್ರಾಣಿಗಳ ಬಲಿ ನೀಡುವುದು ನಿಲ್ಲಿಸಬೇಕು' ಎಂದು ಹೇಳಿದ್ದಾರೆ.
'ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು. ಮಸೀದಿ ಮತ್ತು ದೇವಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು. ಈ ಹಿಂದೆ ಸನಾತನ ಧರ್ಮದಲ್ಲಿಯೂ ಪ್ರಾಣಿಗಳ ತ್ಯಾಗ ಮಾಡಲಾಗುತ್ತಿತ್ತು. ಆದರೀಗ ತೆಂಗಿನಕಾಯಿ ಅರ್ಪಿಸಿದ ರೀತಿಯಲ್ಲಿ ಮುಸ್ಲಿಮರು ಪ್ರಾಣಿ ಬಲಿ ನೀಡುತ್ತಿದ್ದಾರೆ' ಎಂದು ಅವರು ಟೀಕಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯ ಈ ಹೇಳಿಕೆಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ.