ಪಾಟ್ನಾ: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಹಾರದ 243 ಕ್ಷೇತ್ರಗಳ ಪೈಕಿ ಇಂದು ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದ್ದು, 114 ಮಹಿಳಾ ಅಭ್ಯರ್ಥಿಗಳು ಸೇರಿ 1,066 ಉಮೇದುವಾರರು ಕಣದಲ್ಲಿದ್ದಾರೆ.
ಕೊರೊನಾ ವೈರಸ್ ಹಾವಳಿ ನಡುವೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರೀತಿಯ ಯೋಜನೆ ರೂಪಿಸಿಕೊಂಡಿದೆ. 16 ಜಿಲ್ಲೆತ 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ವೋಟಿಂಗ್ ಮಾಡಲಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ವೋಟಿಂಗ್ ಆರಂಭಗೊಳ್ಳಲಿದ್ದು, 5 ಗಂಟೆ ಬದಲಿಗೆ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಕೊರೊನಾ ಹಾವಳಿ ಜೋರಾಗಿರುವ ಕಾರಣ ಸ್ಯಾನಿಟೈಶೇಷನ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ.
ಇಂದಿನ ಚುನಾವಣೆಯಲ್ಲಿ 2.14 ಕೋಟಿ ಮತದಾರರು ವೋಟ್ ಚಲಾವಣೆ ಮಾಡಲಿದ್ದು, ಇದರಲ್ಲಿ 1.01 ಮಹಿಳಾ ಮತದಾರರು ಇದ್ದಾರೆ. ವಿಶೇಷವೆಂದರೆ ಗಯಾ ಕ್ಷೇತ್ರದಲ್ಲಿ ಒಟ್ಟು 27 ಅಭ್ಯರ್ಥಿಗಳು ಕಣದಲ್ಲಿದ್ದು, ಬಂಕಾ ಜಿಲ್ಲೆಯ ಕಟೋರಿಯಾ ಕ್ಷೇತ್ರದಲ್ಲಿ ಕೇವಲ 5 ಅಭ್ಯರ್ಥಿಗಳಿದ್ದಾರೆ.
ಪ್ರಮುಖವಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣನಂದನ್ ವರ್ಮ, ಪ್ರೇಮ್ ಕುಮಾರ್, ಜೈ ಕುಮಾರ್ ಸಿಂಗ್, ಸಂತೋಷ್ ಕುಮಾರ್ ನಿರಾಲ, ವಿಜಯ ಸಿನ್ಹಾ ಮತ್ತು ರಾಮ್‍ನಾರಾಯಣ್ ಮಂಡಲ್ ಭವಿಷ್ಯ ಇಂದು ನಿರ್ಧಾರವಾಗಲಿದೆ. 71 ಕ್ಷೇತ್ರಗಳ ಪೈಕಿ ಜೆಡಿಯು 35 ಕ್ಷೇತ್ರ, ಬಿಜೆಪಿ 29 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಆರ್ಜೆಡಿ 42 ಹಾಗೂ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಲೋಕ ಜನಶಕ್ತಿ ಪಾರ್ಟಿ 41 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ.