ಪಾಟ್ನಾ : ಬಿಹಾರದಲ್ಲಿ ಮೂರನೇ ಹಾಗೂ ಕೊನೆಯ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದೆ. ಇಂದು 15 ಜಿಲ್ಲೆಗಳ 78 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೆೆ ಶೇ.45 ರಷ್ಟು ಮತದಾನವಾಗಿದೆ.
ಹಲವೆಡೆ ಇವಿಎಂ ಮಷಿನ್‌ಗಳು ಕೈ ಕೊಟ್ಟಿದ್ದು, ಮತದಾನ ತಡವಾಗಿದೆ. ಬರಾಹಾದ್ ಗ್ರಾಮದಲ್ಲಿ ಚುನಾವಣಾ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಏಜೆಂಟ್ವೊಬ್ಬರು ಮೃತಪಟ್ಟಿದ್ದು, ಕೆಲ ಕಾಲ ವೋಟಿಂಗ್ ತಡವಾಗಿದೆ.
15 ಜಿಲ್ಲೆಗಳಲ್ಲಿ 2.35 ಕೋಟಿ ಮತದಾರರಿದ್ದು, 33,782 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 4,999 ಮತಕೇಂದ್ರಗಳನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಚುನಾವಣಾ ಕಣದಲ್ಲಿ 110 ಮಹಿಳೆಯರು ಸೇರಿ 1,204 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
78 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಿಗೆ ಮುಂಜಾನೆ 4 ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ. ಇನ್ನುಳಿದ 74 ಸ್ಥಾನಗಳಿಗೆ ಬೆಳಗ್ಗೆ 7 ರಿಂದ ಸಂಜೆ 6ಗಂಟೆವರೆಗೆ ಮತದಾನ ನಡೆಯಲಿದೆ.
ನವೆಂಬರ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು, ನವೆಂಬರ್ 29ಕ್ಕೆ ಈಗಿರುವ ಸಿಎಂ ನಿತೀಶ್ ಕುಮಾರ್ ಸರ್ಕಾರದ ಅವಧಿ ಮುಕ್ತಾಯವಾಗಲಿದೆ.