ಪಶ್ಚಿಮ ಬಂಗಾಳ: ಮಿಡ್ನಾಪುರ ಅರಣ್ಯಾಧಿಕಾರಿಯೊಬ್ಬರು ಪ್ಲಾಸ್ಟಿಕ್ ಬಾಟಲ್ ಹಾಗೂ ರಬ್ಬರ್ ಟೈರ್ಗಳನ್ನು ಬಳಸಿಕೊಂಡು ಗಾರ್ಡನ್ ನಿರ್ಮಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸುಮಾರು 1,100 ಪ್ಲಾಸ್ಟಿಕ್ ಬಾಟಲ್ಸ್ ಹಾಗೂ ರಬ್ಬರ್ ಟೈರ್ಗಳನ್ನು ಬಳಸಿ ಸುಂದರವಾದ ಹಸಿರು ಗಾರ್ಡನ್ವೊಂದನ್ನು ನಿರ್ಮಿಸಿದ್ದಾರೆ. ಮಿಡ್ನಾಪುರ್ ವಿಭಾಗದ ಪಿರಕಾಟ ಅರಣ್ಯ ವಲಯದಲ್ಲಿ ಎಫ್ಆರ್ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಪಾಪನ್ ಮೊಹಾಂತ ಸುಮಾರು 4 ವರ್ಷಗಳಿಂದ ಈ ರೀತಿ ಪ್ಲಾಸ್ಟಿಕ್ ಬಾಟಲ್ ಮೂಲಕ ಗಿಡ ಬೆಳೆಸುತ್ತಿದ್ದಾರೆ. 4 ವರ್ಷದ ಪ್ರಯತ್ನದ ಫಲವಾಗಿ ಒಂದು ವಿಶಿಷ್ಟವಾದ ಸುಂದರ ಗಾರ್ಡನ್ ನಿರ್ಮಾಣವಾಗಿದೆ.
ಸುಮಾರು 4 ವರ್ಷಗಳ ಹಿಂದೆ ಪಿರಕಾಟ ಪ್ರದೇಶಕ್ಕೆ ಎಫ್ಆರ್ಓ ಆಗಿ ನೇಮಕವಾದ ಮೊಹಾಂತರವರಿಗೆ, ಈ ಅರಣ್ಯ ಪ್ರದೇಶ ಪ್ಲಾಸ್ಟಿಕ್ನಿಂದ ಕೂಡಿದ್ದನ್ನು ಕಂಡು ಬೇಸರಗೊಂಡಿದ್ದರಂತೆ. ಹೀಗಾಗಿ ಅದೇ ಪ್ಲಾಸ್ಟಿಕ್ ಬಾಟಲ್ಗಳನ್ನ ಬಳಸಿಕೊಂಡು ಏನಾದರೂ ಮಾಡಬಹುದು ಎಂದು ಯೋಚಿಸಿ, ಪ್ರತಿದಿನ ತಮ್ಮ ಕರ್ತವ್ಯ ಮುಗಿಸಿ ಉಳಿದ ಅವಧಿಯಲ್ಲಿ ಅದೇ ಅರಣ್ಯ ಪ್ರದೇಶದ ಒಂದು ಜಾಗದಲ್ಲಿ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟು, ಪೋಷಿಸುತ್ತಾ ಬಂದಿದ್ದಾರೆ.
ಇನ್ನು ಇವರ ಈ ಪರಿಸರಮುಖಿ ಕಾಳಜಿ ಹಾಗೂ ಗಾರ್ಡನ್ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾವೂ ಕೂಡ ಈ ರೀತಿಯ ಗಾರ್ಡನ್ ಬೆಳೆಸಲು ಮುಂದಾಗಿದ್ದಾರೆ. ಅಲ್ಲದೇ ಇದರಿಂದ ಪ್ರೇರಣೆ ಪಡೆದಿರುವ ಇಲ್ಲಿನ ಶಾಲೆಗಳ ಶಿಕ್ಷಕರು ಕೂಡ ತಮ್ಮ ಶಾಲಾ ಆವರಣದಲ್ಲಿ ಗಾರ್ಡನ್ ನಿರ್ಮಿಸಿದ್ದಾರೆ. ಇದು ಸಂತಸ ತಂದಿದೆ ಎಂದು ಮೊಹಾಂತ ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಗಾರ್ಡನ್ ಪ್ರಮುಖ ಆಕರ್ಷಣೀಯ ಸ್ಥಳವಾಗಿದ್ದು, ನೋಡಿ ಕಣ್ತುಂಬಿಕೊಳ್ಳಲು ಜನ ಇಲ್ಲಿಗೆ ದಾಂಗುಡಿ ಇಡುತ್ತಿದ್ದಾರೆ.
ಒಟ್ಟಿನಲ್ಲಿ ಪ್ಲಾಸ್ಟಿಕ್ನಿಂದ ಪರಿಸರ ಹಾಳಾಗುತ್ತಿರುವ ಆತಂಕದ ಈ ಹೊತ್ತಿನಲ್ಲಿ ಅದೇ ಪ್ಲಾಸ್ಟಿಕ್ ಬಳಸಿ ಗಾರ್ಡನ್ ನಿರ್ಮಿಸಿ, ಪರಿಸರವನ್ನು ಹಸಿರುಮಯವಾಗಿಸುತ್ತಿರುವ ಮೊಹಂತಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.