ಬಿಜಾಪುರ (ಛತ್ತೀಸ್ಗಢ): ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇರಿಸಿದ್ದ ನಾಲ್ಕು ಕೆ.ಜಿ ತೂಕದ ಐಇಡಿ (ಸುಧಾರಿತ ಸ್ಫೋಟಕ ಸಾಧನ)ವನ್ನು ಬಾಂಬ್ ನಿಗ್ರಹ ದಳ ವಶಪಡಿಸಿಕೊಂಡು ನಿಷ್ಕ್ರೀಯಗೊಳಿಸಿದೆ.
ಮುರ್ಕಿನಾರ್ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಪುಸ್ಗುಡಿ ಬಳಿಯಲ್ಲಿ ಸ್ಫೋಟಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು.
ಮುರ್ಕಿನಾರ್ನಿಂದ ಅವಪಲ್ಲಿಗೆ ಹೊರಟ ಕೇಂದ್ರೀಯ ಮೀಸಲು ಪಡೆಯ 229 ಬೆಟಾಲಿಯನ್ನ ಪೊಲೀಸರು ರೋಡ್ ಓಪನಿಂಗ್ ಪಾರ್ಟಿ (ಆರ್ಒಪಿ) ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದರು. ಇದನ್ನೇ ಗುರಿಯಾಗಿಸಿ ಪುಸ್ಗುಡಿ ಬಳಿ ನಕ್ಸಲರು ಐಇಡಿ ಇಡಲು ಪ್ರಯತ್ನಿಸಿದ್ದು, ಈ ವೇಳೆ ನಕ್ಸಲರು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಬಾಂಬ್ ಹಾಗೂ ಐಇಡಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಸದ್ಯಕ್ಕೆ ಬಿಜಾಪುರ ಬಾಂಬ್ ನಿಷ್ಕ್ರೀಯ ದಳ 4 ಕೆ.ಜಿಯ ಐಇಡಿ, ಎರಡು ಟಿಫಿನ್ ಬಾಂಬ್, ಒಂದು ಪೈಪ್ ಬಾಂಬ್ ಅನ್ನು ವಶಕ್ಕೆ ಪಡೆದು ಅನಾಹುತ ತಪ್ಪಿಸಿದ್ದಾರೆ. ಇದರ ಜೊತೆಗೆ ಒಂದು ಬ್ಯಾಗ್ ದೊರಕಿದ್ದು, ವೈರ್ಗಳು, ಡಿಟೋನೇಟರ್ ಹಾಗೂ ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.