ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಸಂಘಟನೆ ಜಮಾತ್ ಇ ಇಸ್ಲಾಮಿ (JeI) ಅನ್ನು ಬ್ಯಾನ್ ಮಾಡಿರುವ ನಿರ್ಧಾರದ ಬಗ್ಗೆ ಕೇಂದ್ರ ಮರುಪರಿಶೀಲನೆ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜೆಇಐ ನಿಷೇಧದಿಂದ ಆ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ದಾರಿ ಮಾಡಿಕೊಟ್ಟಂತಾಗಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ನ ಉಪಾಧ್ಯಕ್ಷರೂ ಆಗಿರುವ ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
1996ರಿಂದ 2015ರವರೆಗೆ ಕಾಶ್ಮೀರದಲ್ಲಿ ಇಂತಹ ಸಂಘಟನೆಗಳ ನಿಷೇಧ ಪ್ರಕ್ರಿಯೆ ವ್ಯಾಪಕವಾಗಿ ನಡೆದಿದೆ. ಇದರಿಂದ ಯಾವುದೇ ಸಾಧನೆಯಾಗಿಲ್ಲ. ಈಗಿನ ಕೇಂದ್ರ ಸರ್ಕಾರ ಈ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದಿದ್ದಾರೆ.
ರಾಜಕೀಯ ನೆಲೆಯಲ್ಲಿ ಸೈದ್ಧಾಂತಿಕವಾಗಿ ನಾವು ಸಹ ಜೆಇಐ ಅನ್ನು ವಿರೋಧಿಸುತ್ತೇವೆ. ಆದರೆ ಇಡೀ ಸಂಘಟನೆಯನ್ನು ಬ್ಯಾನ್ ಮಾಡಿದ್ದು, ಅದರ ನಾಯಕರು, ಸದಸ್ಯರ ಮನೆ ಜಪ್ತಿ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಿಂದ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಘಟನೆಯೊಂದಿಗೆ ಭಿನ್ನಾಭಿಪ್ರಾಯವಿದ್ದರೂ, ಅದರ ಮೇಲಿನ ನಿಷೇಧ ಹೇರಿರುವುದನ್ನು ನಾನು ಒಪ್ಪುವುದಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.