ಮುಂಬೈ: ದೇಶದಾದ್ಯಂತ ಲಾಕ್ಡೌನ್ ಆದೇಶವನ್ನು 3ರ ವೆರೆಗೆ ವಿಸ್ತರಿಸಿದ್ದ ಪರಿಣಾಮ ಮುಂಬೈನಲ್ಲಿ ಸಾವಿರಾರು ವಲಸಿಗರು ಪ್ರತಿಭಟನೆಗೆ ಮುಂದಾಗಿದ್ದರು. ತಮ್ಮ ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಇಲ್ಲಿನ ರೈಲ್ವೆ ನಿಲ್ದಾಣಗಳಲ್ಲಿ ಜನ ಜಮಾಯಿಸಿದ್ರು. ಇವರ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು.
ಇದೀಗ ಈ ಪ್ರಕರಣ ಸಂಬಂಧ ಮುಂಬೈನ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಆರೋಪದಡಿ ಬಂಧಿಸಲಾಗಿದೆ. ದುಬೆ ಎಂಬಾತ ತನ್ನ ಸಾಮಾಜಿಕ ಜಾಲತಾಣದಲ್ಲಿ ಮಹಾರಾಷ್ಟ್ರ ಸರ್ಕಾರದ ಕುರಿತಾಗಿ ವಿಡಿಯೋ ಪೋಸ್ಟ್ ಮಾಡಿದ್ದ.
ಇದರಲ್ಲಿ ಮಹಾರಾಷ್ಟ್ರ ಸರ್ಕಾರವೂ ವಲಸಿಗರಿಗೆ ನೆರವು ನೀಡಬೇಕು. ಲಾಕ್ಡೌನ್ನಿಂದಾಗಿ ಸಿಲುಕಿರುವ ವಲಸಿಗರಿಗೆ ವಾಹನ ವ್ಯವಸ್ಥೆ ಕಲ್ಪಿಸಬೇಕು. ಅವರೆಲ್ಲ ತಮ್ಮ ಊರಿಗೆ ಪ್ರಯಾಣಿಸಲು ಬಯಸುತ್ತಿದ್ದಾರೆ ಅಂತಾ ಹೇಳಿದ್ದರು. ಅಲ್ಲದೇ ಈ ಕುರಿತು ಟ್ವೀಟ್ ಸಹ ಮಾಡಿದ್ದು, ವಲಸಿಗರಿಗೆ ಸೌಲಭ್ಯ ಕಲ್ಪಿಸದೇ ಹೋದಲ್ಲಿ ಏಪ್ರಿಲ್ 18ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರೆ ನೀಡಿದ್ದರು. ಈ ಹಿನ್ನೆಲೆ ನವಿ ಮುಂಬೈ ಪೊಲೀಸರು ದುಬೆಯನ್ನು ಬಂಧಿಸಿ ಬಾಂದ್ರಾ ಪೊಲೀಸರಿಗೆ ಒಪ್ಪಿಸಿದ್ದಾರೆ. ದುಬೆಗೆ ಏಪ್ರಿಲ್ 21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.