ನವದೆಹಲಿ: ಅಯೋಧ್ಯಾ ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂ ವಿವಾದ ಬಗೆಹರಿಸಲು ರಚಿಸಿರುವ ಸಂಧಾನ ಸಮಿತಿ ವರದಿಯನ್ನು ಜುಲೈ 18 ರೊಳಗೆ ಸಲ್ಲಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದೆ.
ಭೂ ವಿವಾದ ಬಗೆಹರಿಸಲು ಸುಪ್ರೀಂಕೋರ್ಟ್ ರಚಿಸಿದ ಸಂಧಾನ ಸಮಿತಿ ಯಾವುದೇ ಪ್ರಗತಿ ಸಾಧಿಸಿಲ್ಲ, ಎಂದು ಮೂಲ ಅರ್ಜಿದಾರರಲ್ಲಿ ಒಬ್ಬರಾದ ಗೋಪಾಲ್ ಸಿಂಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಲಯ ಸಂಧಾನ ಸಮಿತಿಯ ವರದಿ ಬರುವವರೆಗೆ ಕಾದು ನೊಡುವಂತೆ ತಿಳಿಸಿದ್ದು, ಜುಲೈ 18ರ ಮುಂಚಿತವಾಗಿ ಸಂಧಾನ ಪ್ರಗತಿಯ ವರದಿ ಸಲ್ಲಿಸುವಂತೆ ಸಮಿತಿಗೆ ಆದೇಶ ನೀಡಿದೆ.
ಭೂ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಸಲುವಾಗಿ ನ್ಯಾಯಾಲಯವು ಮಾರ್ಚ್ 8ರಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಫಕೀರ್ ಮೊಹಮ್ಮದ್ ಇಬ್ರಾಹಿಂ ಕಲಿಫುಲ್ಲಾ ಅವರ ಅಧ್ಯಕ್ಷತೆಯಲ್ಲಿ ಮೂರು ಜನರ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿತ್ತು. ಸಮಿತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಮದ್ರಾಸ್ ಹೈಕೋರ್ಟ್ನ ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು.
ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಸುವ ಸಲುವಾಗಿ ಸಂಧಾನ ಪ್ರಕ್ರಿಯೆಯನ್ನು "ಅತ್ಯಂತ ಗೌಪ್ಯತೆಯಿಂದ" ನಡೆಸಬೇಕು ಎಂದು ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ವಿವಾದಕ್ಕೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ಆಗಸ್ಟ್ 15 ರವರೆಗೆ ಸಮಿತಿಗೆ ಸುಪ್ರೀಂಕೋರ್ಟ್ ಸಮಯ ನೀಡಿದೆ.