ಗುವಾಹಟಿ: ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ಅಸ್ಸೋಂನಲ್ಲಿ ಕಾಲೇಜು ಉಪನ್ಯಾಸಕನೋರ್ವನನ್ನು ಬಂಧಿಸಲಾಗಿದೆ.
ಸೌರದೀಪ್ ಸೇನ್‌ಗುಪ್ತಾ ಬಂಧಿತ ಶಿಕ್ಷಕ. ಭೌತಶಾಸ್ತ್ರದ ಅತಿಥಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ತಮ್ಮ ಫೇಸ್‌ಬುಕ್ ಪೇಜ್ನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್, ದೆಹಲಿಯಲ್ಲಿ ನಡೆದ ಗೋಧ್ರಾ ಹತ್ಯಾಕಾಂಡವನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.
ಈ ಕುರಿತಂತೆ ಕಾಲೇಜು ವಿದ್ಯಾರ್ಥಿಗಳು ದೂರು ನೀಡಿದ್ದರು. ಬಿಜೆಪಿ, ಆರ್‌ಎಸ್‌ಎಸ್, ಪ್ರಧಾನಿ ನರೇಂದ್ರ ಮೋದಿ, ಸನಾತನ ಧರ್ಮ ಹಾಗೂ ಹಿಂದೂ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿ, ಗಲಭೆ ಸೃಷ್ಠಿಸುವ ಜೊತೆಗೆ ಧಾರ್ಮಿಕ ಭಾವನೆಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಲೇಜಿನ ಆಡಳಿತ ಮಂಡಳಿಗೂ ದೂರು ನೀಡಿದ್ದರು. ಅಲ್ಲದೆ ಕ್ಷಮೆ ಕೇಳುವಂತೆ ಆಗ್ರಹಿಸಿ ಪ್ರತಿಭಟನೆಯನ್ನೂ ಕೂಡ ನಡೆಸಲಾಗಿತ್ತು. ದೂರಿನ ಹಿನ್ನೆಲೆ ಅತಿಥಿ ಉಪನ್ಯಾಸಕ ಸೌರದೀಪ್ ಸೇನ್‌ಗುಪ್ತಾರನ್ನು ಬಂಧಿಸಲಾಗಿದೆ.