ಗುವಾಹಟಿ: ಪ್ರವಾಹದಿಂದಾಗಿ ಅಸ್ಸೋಂನ 13 ಜಿಲ್ಲೆಗಳಲ್ಲಿ ಸುಮಾರು 3.18 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಸರ್ಕಾರ ಸೋಮವಾರ ಬಿಡುಗಡೆ ಮಾಡಿರುವ ಬುಲೆಟಿನ್ ತಿಳಿಸಿದೆ.
ನಗೌನ್ ಜಿಲ್ಲೆಯಲ್ಲಿ ಸೋಮವಾರ ನೀರಿನಲ್ಲಿ ಮುಳುಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಬಿಡುಗಡೆ ಮಾಡಿದ ದೈನಂದಿನ ಪ್ರವಾಹ ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ಪ್ರವಾಹದಿಂದ ಬಲಿಯಾದವರ ಸಂಖ್ಯೆ 119ಕ್ಕೆ ತಲುಪಿದೆ.
ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಕಮ್ರೂಪ್, ಮೊರಿಗಾಂವ್, ಹೊಜೈ, ನಗೌನ್, ಮಜುಲಿ, ಜೋರ್ಹತ್, ಶಿವಸಾಗರ್, ದಿಬ್ರುಘರ್, ಟಿನ್ಸುಕಿಯಾ ಮತ್ತು ಪಶ್ಚಿಮ ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ನಗೌನ್ ಜಿಲ್ಲೆಯಲ್ಲಿ ಅತೀ ಹೆಚ್ಚು ಸುಮಾರು 1.99 ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದು, ನಂತರದ ಸ್ಥಾನದಲ್ಲಿ ಮೊರಿಗಾಂವ್ ಜಿಲ್ಲೆಯಲ್ಲಿ 36,400 ಮತ್ತು ಕಮ್ರಪ್ ಜಿಲ್ಲೆಯಲ್ಲಿ 25,100 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯಾದ್ಯಂತ ಒಟ್ಟು 389 ಗ್ರಾಮಗಳು ಮುಳುಗಡೆಯಾಗಿದ್ದು, 13,463 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಅತೀ ಹೆಚ್ಚು ತೊಂದರೆಗೊಳಗಾದ ನಾಲ್ಕು ಜಿಲ್ಲೆಗಳಲ್ಲಿ 13 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ 117 ಜನರು ಆಶ್ರಯ ಪಡೆದಿದ್ದಾರೆ. ಬ್ರಹ್ಮಪುತ್ರ ನದಿಯು ಜೋರ್ಹತ್ ಜಿಲ್ಲೆಯ ನಿಮಾತಿಘಾಟ್ ಮತ್ತು ಸೋನಿತ್ಪುರದ ತೇಜ್ಪುರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.