ಮುಂಬೈ: ಇಂಟೀರಿಯರ್ ಡಿಸೈನರ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ "ಅಕ್ರಮ ಬಂಧನ" ಪ್ರಶ್ನಿಸಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಲಿಬಾಗ್ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದಾರೆ.
ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ಣಿಕ್ ಅವರ ವಿಭಾಗೀಯ ಪೀಠವು ಇಂದು ಮಧ್ಯಾಹ್ನ ಅರ್ಜಿ ಆಲಿಸಲಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅರ್ನಾಬ್ ಗೋಸ್ವಾಮಿ ಅವರನ್ನು, ಅವರ ನಿವಾಸದಿಂದ ಬುಧವಾರ ಬಂಧಿಸಲಾಗಿದ್ದು, ಅಲಿಬಾಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಅಲಿಬಾಗ್ ಜಿಲ್ಲಾ ನ್ಯಾಯಾಲಯವು ಪ್ರಕರಣ ಸಂಬಂಧ ಅರ್ನಾಬ್ ಮತ್ತು ಫಿರೋಜ್ ಶೇಖ್, ನಿತೇರ್ಶ ಸರ್ದಾ ಅವರನ್ನು ನ್ಯಾಯ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಸ್ಥಳೀಯ ಶಾಲೆಯಲ್ಲಿ ಅರ್ನಾಬ್ ಅವರನ್ನು ಇರಿಸಲಾಗಿದ್ದು, ಈ ಶಾಲೆಯನ್ನು ಅಲಿಬಾಗ್ ಜೈಲಿಗೆ ಕೋವಿಡ್ -19 ಕೇಂದ್ರ ಎಂದು ಗೊತ್ತುಪಡಿಸಲಾಗಿದೆ.
ಅರ್ಜಿಯಲ್ಲಿ "ಅಕ್ರಮ ಬಂಧನ"ವನ್ನು ಪ್ರಶ್ನಿಸಿರುವ ಅರ್ನಾಬ್, ಪ್ರಕರಣದ ತನಿಖೆಗೆ ತಡೆ ನೀಡಬೇಕು ಮತ್ತು ಕೂಡಲೆ ಬಂಧನದಿಂದ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.