ಮಂಡಿ (ಹಿಮಾಚಲ ಪ್ರದೇಶ): ಭಾರತೀಯ ಸೈನಿಕರೊಬ್ಬರ ಮದುವೆಗೆ ಎಲ್ಲ ಸಿದ್ಧತೆ ಮುಗಿದಿತ್ತು, ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ನವದಂಪತಿ ಹಸೆಮಣೆ ಏರುವುದೊಂದೇ ಬಾಕಿ ಇತ್ತು. ಆದ್ರೆ ಕೊನೆ ಗಳಿಗೆಯಲ್ಲಿ ವಿವಾಹ ಮತ್ತೊಂದು ದಿನಕ್ಕೆ ಮುಂದೂಡಲ್ಪಟ್ಟಿದೆ.
ಹೌದು, ಜಮ್ಮುಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರೊಬ್ಬರ ಮದುವೆ ಕೊನೆ ಗಳಿಗೆಯಲ್ಲಿ ಮುಂದೂಡಲ್ಪಟ್ಟಿದೆ.
ಹಿಮಾಚಲ ಪ್ರದೇಶದ ಖೇರ್ ಪ್ರದೇಶದ ನಿವಾಸಿಯಾದ ಸುನೀಲ್ ಕುಮಾರ್ ಎಂಬ ಯೋಧನ ಮದುವೆ ಇದೇ ಜನವರಿ 16 ರಂದು ನಿಶ್ಚಯವಾಗಿತ್ತು. ಅಂತೆಯೇ ಖುಷಿಯಿಂದ ಸುನೀಲ್ ಅವರು ಹಸೆಮಣೆ ಏರಲು ಬರಲು ಸಜ್ಜಾಗಿದ್ದರು. ಆದ್ರೆ ಜಮ್ಮುಕಾಶ್ಮೀರದಲ್ಲಿ ಹಿಮಪಾತವಾದ ಕಾರಣ ಸಂಚಾರ ಬಂದ್ ಆಗಿದೆ. ಜೊತೆಗೆ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ನಲ್ಲಿ ಬರಲು ಕೂಡ ಇವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸಿದ್ಧವಾಗಿದ್ದ ಮದುವೆ ಮುಂದೂಡಲ್ಪಟ್ಟಿದೆ.
ಸಿದ್ಧವಾಗಿದ್ದ ಮದುವೆ ಮೆರವಣಿಗೆಯನ್ನ ರದ್ದುಗೊಳಿಸಿದ್ದೇವೆ. ನಮ್ಮ ಸಹೋದರ ಕರೆ ಮಾಡಿ ಅಲ್ಲಿನ ಪರಿಸ್ಥಿತಿ ತಿಳಿಸಿ, ಮಂಗಳವಾರ ಬರುವುದಾಗಿ ಹೇಳಿದ್ದಾರೆ. ಅವರು ಬಂದ ನಂತರ ಎರಡೂ ಕುಟುಂಬದವರು ಸೇರಿ ಮದುವೆಗೆ ಮತ್ತೊಂದು ದಿನ ನಿಗದಿಪಡಿಸುತ್ತೇವೆ ಎಂದು ಮದುಮಗ ಸುನೀಲ್ ಸಹೋದರ ವಿಕ್ಕಿ ಕುಮಾರ್ ಮಾಹಿತಿ ನೀಡಿದ್ದಾರೆ.