ಜೈಪುರ : ಮಾರುಕಟ್ಟೆಯಲ್ಲಿ 'ಆಡು'ಗಳನ್ನು ಖರೀದಿಸಿದಂತೆ ನಮ್ಮ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, 'ಕುದುರೆ ವ್ಯಾಪಾರ' ಮತ್ತು 'ಆನೆ ವ್ಯಾಪಾರ' ನಂತರ ಶಾಸಕರ ವಿಷಯದಲ್ಲಿ 'ಆಡು ವ್ಯಾಪಾರ'ದ ಕುರಿತು ಮಾತನಾಡಲು ಸಿಎಂ ಪ್ರಾರಂಭಿಸಿದ್ದಾರೆ. ಶಾಸಕರಿಗೆ ಅಂತಹ ಪದಗಳನ್ನು ಬಳಸುವ ಮೂಲಕ ಸಿಎಂ ಅವಮಾನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಸಿಎಂ ಗೆಹ್ಲೋಟ್ ಅವರು ತಮ್ಮ ಸ್ವಂತ ಶಾಸಕರನ್ನೇ ನಂಬುತ್ತಿಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್," ಸಿಎಂ ಗೆಹ್ಲೋಟ್ ಹೈಕಮಾಂಡ್ ಜೊತೆ ಏನು ಮಾತನಾಡಿದ್ದಾರೆ ಎಂಬುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಬಿಜೆಪಿ ಪಿತೂರಿ ನಡೆಸುತ್ತಿದೆ, ಈ ಬಗ್ಗೆ ನಮಗೆ ಗೊತ್ತಿದೆ. ಇದು ಮಧ್ಯಪ್ರದೇಶವಲ್ಲ, ಬಿಜೆಪಿಯ ಪಿತೂರಿ ಇಲ್ಲಿ ಯಶಸ್ವಿಯಾಗವುದಿಲ್ಲ. ಅದನ್ನು ನಾವು ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ತೋರಿಸಿದ್ದೇವೆ. ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷ ಸತೀಶ್ ಪುನಿಯಾ, "ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒಬ್ಬ ಕುತಂತ್ರ ರಾಜಕಾರಣಿ, ಅವರು ಆಡಳಿತದಲ್ಲಿ ವಿಫಲರಾಗಿದ್ದಕ್ಕಾಗಿ ಬಿಜೆಪಿಯನ್ನು ದೂಷಿಸಲು ಪ್ರಾರಂಭಿಸಿದ್ದಾರೆ. ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಅವರು ಶಾಸಕರ ಸಂಖ್ಯಾ ಬಲವನ್ನು ಹೊಂದಿರುವಾಗ ಯಾರು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರೆ" ಎಂದು ಪ್ರಶ್ನಿಸಿದ್ದಾರೆ.