ಅಮರಾವತಿ : ಆಂಧ್ರಪ್ರದೇಶದಲ್ಲಿ ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಕೇಂದ್ರ ಮಾಹಿತಿ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ಗೆ ಪತ್ರ ಬರೆದಿದ್ದಾರೆ.
ಆಂಧ್ರದಲ್ಲಿ ಒಟ್ಟು 132 ವೆಬ್‌ಸೈಟ್‌ಗಳು ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್‌ಗೆ ಕಾರಣವಾಗುತ್ತಿವೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ. ಇಂಟರ್ನೆಟ್ ಸೇವೆ ಒದಗಿಸುವವರು ಆಂಧ್ರದಲ್ಲಿ ಅವುಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆ ಸಿಎಂ ಕೋರಿದ್ದಾರೆ.
ಆಂಧ್ರಪ್ರದೇಶ ಗೇಮಿಂಗ್ ಕಾಯ್ದೆ 1974 ನ್ನು ತಿದ್ದುಪಡಿ ಮಾಡಿ ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಷೇಧಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಿಎಂ ಜಗನ್ ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ತಿದ್ದುಪಡಿಯ ಅಧಿಸೂಚನೆಯನ್ನು 25 ಸೆಪ್ಟೆಂಬರ್ 2020 ರಂದು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ. ಕಾಯ್ದೆ ಪ್ರಕಾರ, ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅಪರಾಧವಾಗಿರುತ್ತದೆ.
ಆನ್‌ಲೈನ್ ಜೂಜಾಟದ ಆ್ಯಪ್ ಮತ್ತು ವೆಬ್ಸೈಟ್ಗಳಿಂದ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಹಲವರು ಆಸ್ತಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಎಲ್ಲರಿಗೂ ಸುಲಭವಾಗಿ ಸಿಗುತ್ತದೆ. ಇದರಿಂದ ಆನ್‌ಲೈನ್ ಗೇಮಿಂಗ್ಗೆ ಸುಲಭವಾಗಿ ಯುವ ಜನಾಂಗ ಆಕರ್ಷಿತರಾಗುತ್ತಾರೆ ಎಂದು ಸಿಎಂ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಂಧ್ರದಲ್ಲಿ ಆನ್‌ಲೈನ್ ಜೂಜಾಟ ಸಂಬಂಧಿತ ಗೇಮ್ಗಳನ್ನು ನಿಲ್ಲಿಸುವಂತೆ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ತಕ್ಷಣ ನಿರ್ದೇಶನ ನೀಡುವಂತೆ ಕೇಂದ್ರ ಸಚಿವರಿಗೆ ಸಿಎಂ ಮನವಿ ಮಾಡಿದ್ದಾರೆ.