ಮುಂಬೈ: ಅನ್ವಯ್ ನಾಯ್ಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಅಲಿಬಾಗ್ ಜಿಲ್ಲಾ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಅಲಿಬಾಗ್ ಜಿಲ್ಲಾ ನ್ಯಾಯಾಲಯವು ಪ್ರಕರಣ ಸಂಬಂಧ ಅರ್ನಬ್ ಮತ್ತು ಫಿರೋಜ್ ಶೇಖ್, ನಿತೇರ್ಶ ಸರ್ದಾ ಅವರನ್ನು ನ್ಯಾಯ ಬಂಧನಕ್ಕೆ ಒಪ್ಪಿಸಿದೆ.
ಮೊದಲ ದಿನವೇ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವುದು ನಮ್ಮ ಗೆಲುವು. ಪೊಲೀಸ್ ಕಸ್ಟಡಿಯನ್ನ ತಿರಸ್ಕರಿಸಿ, ನ್ಯಾಯಂಗ ಬಂಧನಕ್ಕೆ ಕೋರ್ಟ್ ಕಳುಹಿಸಿದೆ. ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆಗೆ ಬರಲಿದೆ ಎಂದು ಅರ್ನಬ್ ಪರ ವಕೀಲ ಗೌರವ್ ಪಾರ್ಕರ್ ತಿಳಿಸಿದ್ದಾರೆ.
2018 ರದ್ದು, 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯ್ಕ್ ಮತ್ತು ಅವರ ತಾಯಿ ಕುಮುದಾ ನಾಯ್ಕ್ ಅವರು 2018ರ ಮೇ ತಿಂಗಳಲ್ಲಿ ಅಲಿಬಾಗ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ನಲ್ಲಿ ಅನ್ವಯ್, ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರು ವ್ಯಕ್ತಿಗಳು ನನಗೆ ನೀಡಬೇಕಿದ್ದ 5.40 ಕೋಟಿ ರೂಪಾಯಿ ಪಾವತಿಸಲಿಲ್ಲ, ಇದು ಹಣಕಾಸಿನ ತೊಂದರೆಗಳಿಗೆ ಕಾರಣವಾಯಿತು ಎಂದು ಬರೆದಿದ್ದರು.
ಅನ್ವಯ್ ನಾಯ್ಕ್ ಅವರ ಪುತ್ರಿ ಅದ್ನ್ಯಾ ನಾಯಕ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಭೇಟಿ ಮಾಡಿ ಅರ್ನಬ್ ಗೋಸ್ವಾಮಿ ಅವರು ಬಾಕಿ ಪಾವತಿಸದಿರುವ ಬಗ್ಗೆ ಅಲಿಬಾಗ್ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಮನವಿ ಸಲ್ಲಿಸಿದ್ದರು. 2020ರ ಮೇ ತಿಂಗಳಿನಲ್ಲಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಮಹಾರಾಷ್ಟ್ರ ಗೃಹ ಸಚಿವರು ಆದೇಶಿಸಿದ್ದರು.