ನವದೆಹಲಿ: 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಧ್ವಜಾರೋಹಣ ನಡೆಸಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ಸಾಧನೆ, ದೇಶ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಬಗ್ಗೆ ನಮೋ ಮಾತನಾಡುವ ಸಾಧ್ಯತೆ ದಟ್ಟವಾಗಿದೆ.
ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಈ ವಿಷಯದ ಮೇಲೆ ಹೆಚ್ಚಿನ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಇದರ ಜತೆಗೆ ಕೆಲವೊಂದು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕಳೆದ ವರ್ಷ ನಮೋ ಭಾಷಣದ ವೇಳೆ ತ್ರಿವಳಿ ತಲಾಖ್, ಜಮ್ಮು-ಕಾಶ್ಮೀರ್ದಲ್ಲಿನ 370ನೇ ವಿಧಿ ರದ್ದುಗೊಳಿಸುವ ಕ್ರಮದ ಬಗ್ಗೆ ಮಾತನಾಡಿದ್ದರು. ಜತೆಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಒತ್ತು ನೀಡಿದ್ದರು. 5 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆ ಸಾಧಿಸುವ ಬಗ್ಗೆ ಹೇಳಿದ್ದರು.
ಬೆರಳೆಣಿಕೆಯಷ್ಟು ಅತಿಥಿಗಳು, ಪಿಪಿಇ ಕಿಟ್ನಲ್ಲಿ ಪೊಲೀಸ್: ಕೆಂಪು ಕೋಟೆಯಲ್ಲಿ ಈ ಸಲದ ಸ್ವಾತಂತ್ರ್ಯೋತ್ಸವ ಹೇಗೆ!?
74ನೇ ಸ್ವಾತಂತ್ರ್ಯ ದಿನದ ಭಾಷಣದ ವೇಳೆ ಕೋವಿಡ್-19 ನಿಯಂತ್ರಣಕ್ಕೆ ತೆಗೆದುಕೊಂಡಿರುವ ಸರ್ಕಾರದ ನಿರ್ಧಾರ, ದೇಶದ ಆರ್ಥಿಕತೆ ಹೆಚ್ಚಿಸಲು ಆರ್ಥಿಕ ಸುಧಾರಣಾ ಕ್ರಮ, ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ಭೂಮಿ ಪೂಜೆ, ಪೂರ್ವ ಲಡಾಕ್ನಲ್ಲಿ ಭಾರತ-ಚೀನಾ ಸೈನ್ಯದ ಸಂಘರ್ಷದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.
ಕೃಷಿ ಮತ್ತು ರಕ್ಷಣಾ ಇಲಾಖೆಗೆ ಈಗಾಗಲೇ ವಿವಿಧ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಆತ್ಮನಿರ್ಭರ್ ಭಾರತ್, ಜನ್ ಧನ್ ಯೋಜನೆ, ಸ್ಟಾರ್ಟ್ ಅಫ್ ಇಂಡಿಯಾ, ಸ್ವಚ್ಛ ಭಾರತ್ ಮಿಷನ್ ಬಗ್ಗೆ ಮೋದಿ ಮತ್ತೊಮ್ಮೆ ಬೆಳಕು ಚೆಲ್ಲಬಹುದು.20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ. ಇದರ ಜತೆಗೆ ಆತ್ಮನಿರ್ಭರ್ ಭಾರತಕ್ಕೆ ಹೆಚ್ಚಿನ ಒತ್ತು ಜತೆಗೆ ಕೊರೊನಾ ಲಸಿಕೆಯಲ್ಲಿ ಭಾರತದ ಕೊಡುಗೆ ಏನು ಎಂಬುದರ ಬಗ್ಗೆ ಮಾತನಾಡಲಿದ್ದಾರೆ.
ಕೊರೊನಾ ವೈರಸ್ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣದಲ್ಲಿ ಭಾಗಿಯಾಗಲಿದ್ದು, ಕೇವಲ ಬೆರಳೆಣಿಕೆಯಷ್ಟು ಗಣ್ಯರು ಆಗಮಿಸಲಿದ್ದಾರೆ. ಪಿಪಿಇ ಕಿಟ್ ಧರಿಸಿಕೊಂಡು ಪೊಲೀಸರು ಭಾಗಿಯಾಗಲಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿದೆ.