ಉತ್ತರಕಾಶಿ: ಚಳಿಗಾಲದ ವಾಸ ಸ್ಥಾನವಾದ ಖರ್ಸಾಲಿಯಿಂದ ಯಮುನಾ ದೇವಿಯ ವಿಗ್ರಹವನ್ನು ಇಂದು ಯಮುನೋತ್ರಿಗೆ ಕೊಂಡೊಯ್ಯಲಾಯಿತು. ಕೊರೊನಾ ಸೋಂಕಿನ ಭೀತಿಯಿಂದಾಗಿ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಮೆರವಣಿಗೆಯಲ್ಲಿ ಭಕ್ತರಿಗೆ ಅವಕಾಶ ನೀಡಿರಲಿಲ್ಲ.
ಇಂದು ಬೆಳಗ್ಗೆ ಕೆಲವೇ ಕೆಲವು ಮಂದಿ ಮಾತ್ರ ದೇವಿಯ ವಿಗ್ರಹವಿರುವ ಪಲ್ಲಕ್ಕಿ ಹೊತ್ತು ಮೆರವಣಿಗೆ ಮೂಲಕ ಸಾಗಿದರು. ಆರು ತಿಂಗಳ ಚಳಿಗಾಲದ ವಿರಾಮದ ನಂತರ ಯಮುನೋತ್ರಿ ಪ್ರವೇಶದ್ವಾರ ಬೇಸಿಗೆಯಲ್ಲಿ ಮತ್ತೆ ತೆರೆಯುತ್ತದೆ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶವನ್ನು ನಿರಾಕರಿಸಲಾಗಿದೆ.
ಪ್ರತಿವರ್ಷ ಯಮುನಾ ದೇವಿಯ ವಿಗ್ರಹ ಹೊತ್ತ ಪಲ್ಲಕ್ಕಿಯನ್ನು ವೇದ ಮಂತ್ರಗಳ ಪಠಣದ ಮೂಲಕ ಹೊರ ತೆಗೆಯಲಾಗುತ್ತದೆ. ಮೆರವಣಿಗೆಯಲ್ಲಿ ಆರ್ಮಿ ಬ್ಯಾಂಡ್ ಸೇರಿದಂತೆ ಗ್ರಾಮಸ್ಥರ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸಲಾಗುತ್ತಿತ್ತು.
ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರಿನಾಥ್ ಎಂಬ ನಾಲ್ಕು ಯಾತ್ರಾ ಸ್ಥಳಗಳನ್ನು ಒಟ್ಟಾಗಿ ಚಾರ್ ಧಾಮ್ ಎಂದು ಕರೆಯಲಾಗುತ್ತದೆ. ಈ ಧಾರ್ಮಿಕ ಕೇಂದ್ರಗಳು ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳನ್ನು ಸೆಳೆಯುತ್ತಿದ್ದು, ಉತ್ತರ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾಗಿವೆ.