ವಾಷಿಂಗ್ಟನ್: ಇರಾನ್‌ನ ಖುದ್ಸ್ ಪಡೆಯ ಕಮಾಂಡರ್ ಮೇಜರ್ ಜನರಲ್ ಖಸೀಮ್ ಸುಲೇಮಾನಿಯನ್ನು ಹತ್ಯೆಗೈಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದಿಂದ ಮಧ್ಯಪ್ರಾಚ್ಯ ಮತ್ತು ಪ್ರಸ್ತುತ ಅಮೆರಿಕದ ರಾಜಕೀಯ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಾವಣೆ ಮಾಡಿರುವ ಸಾಧ್ಯತೆ ಇದೆ.
ಅಮೆರಿಕದ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಪರಿಣಿತರೂ ಸೇರಿದಂತೆ ಹಲವು ರಾಜಕೀಯ ಪರಿಣಿತರು ಪ್ರಸ್ತುತ ಕಾಣಿಸಿಕೊಂಡಿರುವ ಕಾರ್ಮೋಡ ಅತ್ಯಂತ ಗಮನಾರ್ಹವಾದದ್ದು ಎಂದಿದ್ದಾರೆ. ಅಷ್ಟೇ ಅಲ್ಲ, ಯುದ್ಧ ನಡೆಯುವ ಸಾಧ್ಯತೆಯನ್ನೂ ಅವರು ಊಹಿಸಿದ್ದಾರೆ. ಯಾಕೆಂದರೆ ಈ ಹಿಂದಿನ ಅಮೆರಿಕದ ಅಧ್ಯಕ್ಷರು ಸುಲೇಮಾನಿಯನ್ನು ಹತ್ಯೆಗೈಯಲು ಹಿಂಜರಿಯುತ್ತಿದ್ದರು. ಹೀಗಾಗಿ ದಿನದಿಂದ ದಿನಕ್ಕೆ ಪರಿಸ್ಥಿತಿ ತೀವ್ರವಾಗುತ್ತಲೇ ಸಾಗಿತು.
ಆದರೆ ಪ್ರಸ್ತುತ ಅಮೆರಿಕ ಅಧ್ಯಕ್ಷ ಟ್ರಂಪ್ ರಿಸ್ಕ್ ತೆಗೆದುಕೊಳ್ಳಲು ನಿರ್ಧರಿಸಿದರು. ಇದೇ ಕಾರಣಕ್ಕೆ ಅವರು ಇರಾಕ್‌ನಲ್ಲಿ ದಾಳಿ ನಡೆಸಲು ಆದೇಶಿಸಿದ್ದರು. ಆದರೆ ಈ ನಿರ್ಧಾರ ಯಾವ ರೀತಿಯ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ನೋಡಬಹುದು. ಅಮೆರಿಕ ಅಧ್ಯಕ್ಷರಿಗೆ ಸದ್ಯ ಯುದ್ಧ ಬೇಕಾಗಿಲ್ಲ. ಅಷ್ಟೇ ಅಲ್ಲ, ಇರಾನ್‌ನಲ್ಲಿ ಅಧಿಕಾರ ಬದಲಾವಣೆಯೂ ಆಗಬೇಕಿಲ್ಲ ಎಂದು ಅಮೆರಿಕದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಸುಲೇಮಾನಿಯನ್ನು ಹತ್ಯೆಗೈದ ಡ್ರೋನ್ ದಾಳಿ ನಡೆದ ನಂತರದಲ್ಲಿ ಅಮೆರಿಕದ ನಿಲುವನ್ನು ವಿದೇಶಾಂಗ ಸಚಿವ ಮೈಕ್ ಪೊಂಪ್ಯೋ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇದು ಯುದ್ಧಕ್ಕೆ ಪ್ರಚೋದನೆ ನೀಡುವ ದಾಳಿಯಲ್ಲ ಎಂಬ ಸಂದೇಶವನ್ನು ಅಮೆರಿಕವು ಇರಾನ್‌ಗೆ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಇರಾನ್‌ಗೂ ಕೂಡ ಸಂಪೂರ್ಣ ಪ್ರಮಾಣದ ಯುದ್ಧ ನಡೆಸುವ ಅಗತ್ಯವಿಲ್ಲ. ಯಾಕೆಂದರೆ ಅಮೆರಿಕದ ವಿರುದ್ಧ ತಾವು ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿದೆ. ಆದರೆ ಕಠಿಣ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ಹೇಳಿಕೊಂಡಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಪರ ಪಡೆಗಳು ಅಮೆರಿಕದ ಸೇನೆಯ ವಿರುದ್ಧ ದಾಳಿ ನಡೆಸುವ ಬೆದರಿಕೆ ಹಾಕಿವೆ. ಇದು ಅಮೆರಿಕ ವಿಧಿಸಿರುವ ನಿಷೇಧವು ಯಾವ ಹಂತಕ್ಕೆ ಅವರ ನೋವನ್ನು ಹೆಚ್ಚಿಸಿದೆ ಎಂಬುದನ್ನು ನಮಗೆ ತಿಳಿಸುತ್ತದೆ.
ಅಮೆರಿಕ ನಡೆಸಿದ ದಾಳಿಗೆ ಮೊದಲ ಸುತ್ತಿನ ಪ್ರತೀಕಾರದ ರೂಪದಲ್ಲಿ ಮಂಗಳವಾರ ಇರಾನ್ ಕೆಲವು ಕ್ಷಿಪಣಿಗಳನ್ನು ಇರಾಕ್‌ನಲ್ಲಿರುವ ಅಮೆರಿಕದ ಪಡೆಗಳ ಮೇಲೆ ಉಡಾವಣೆ ಮಾಡಿದೆ. ಇದು ಇನ್ನಷ್ಟು ಪ್ರತೀಕಾರಕ್ಕೆ ಕಾರಣವಾಗದಿರಲಿ ಮತ್ತು ಇರಾನ್ ಲೆಕ್ಕಾಚಾರ ತಪ್ಪಾಗದಿರಲಿ. ಈಗ ನಡೆಯುತ್ತಿರುವ ಪ್ರತಿರೋಧ ಮತ್ತು ಪ್ರತಿಕಾರದ ದಾಳಿಗಳಿಗೆಲ್ಲವೂ ಮೂಲ ಕೆಲವು ತಿಂಗಳ ಹಿಂದೆ ನಡೆದ ದಾಳಿಯನ್ನೇ ಆಧರಿಸಿವೆ. ಕೆಲವೇ ತಿಂಗಳುಗಳ ಹಿಂದೆ ಅಮೆರಿಕದ ಡ್ರೋನ್ ಒಂದನ್ನು ಇರಾನ್ ಹೊಡೆದುರುಳಿಸಿತ್ತು. ತಕ್ಷಣವೇ ಟ್ರಂಪ್ ಪ್ರತೀಕಾರವಾಗಿ ದಾಳಿ ನಡೆಸಲು ಆದೇಶಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇದನ್ನು ತಡೆಹಿಡಿದಿದ್ದರು.
ಅಷ್ಟಕ್ಕೇ ಸುಮ್ಮನಾಗದ ಇರಾನ್ ನಂತರ ಸೆಪ್ಟೆಂಬರ್‌ನಲ್ಲಿ ಸೌದಿ ಅರೇಬಿಯಾದ ತೈಲ ಘಟಕದ ಮೇಲೆ ದಾಳಿ ನಡೆಸಿತು. ಇನ್ನೂ ತೀರಾ ಇತ್ತೀಚೆಗಂತೂ ಕಿರ್ಕುಕ್ ಬಳಿ ಇರುವ ಸೇನಾ ನೆಲೆಯ ಮೇಲೆ ಡಿ. 27 ರಂದು ದಾಳಿ ನಡೆಸಿತು. ಈ ದಾಳಿಯಲ್ಲಿ ಒಬ್ಬ ಅಮೆರಿಕದ ಗುತ್ತಿಗೆದಾರರು ಸಾವನ್ನಪ್ಪಿದ್ದಾರೆ. ಇರಾನ್ ಪರವಾಗಿ ಕೆಲಸ ಮಾಡುವ ಇರಾಕ್‌ನ ಶಿಯಾ ಪಡೆಯ ಖತೈಬ್ ಹೆಜ್ಬೊಲ್ಲಾ ಮೇಲೆ ದಾಳಿ ನಡೆಸಲು ಟ್ರಂಪ್ ಯುದ್ಧ ವಿಮಾನವನ್ನು ಕಳುಹಿಸಿದರು. ಈ ದಾಖಲಿಯಲ್ಲಿ 25 ಜನರು ಸಾವನ್ನಪ್ಪಿದರು. ಈ ವೇಳೆ ಸುಲೇಮಾನಿಯ ಜೊತೆಗೆ ಇರಾಕ್ ಶಿಯಾ ಪಡೆಯ ಮುಖ್ಯಸ್ಥ ಮಹದಿ ಅಲ್ ಮುಹಾಂದಿಸ್ ಕೂಡ ಸಾವನ್ನಪ್ಪಿದರು.
ಇದಕ್ಕೆ ಪ್ರತಿಯಾಗಿ ಹೊಸ ವರ್ಷದ ದಿನ ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿ ರಾಯಭಾರ ಕಚೇರಿಯ ಅಧಿಕಾರಿಗಳು ಸಿಕ್ಕಿಹಾಕಿಕೊಳ್ಳುವಂತಾಯಿತು. ಖತೈಬ್ ಹೆಜ್ಬೊಲ್ಲಾ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಶಿಯಾ ಪಡೆ ಈ ದಾಳಿ ನಡೆಸಿತ್ತು. ಪ್ರತಿಭಟನಾಕಾರರು ಮುಖ್ಯ ಗೇಟ್ ಅನ್ನು ಒಡೆದುಕೊಂಡು ರಾಯಭಾರ ಕಚೇರಿಯ ಒಳಗೆ ನುಗ್ಗಿದ್ದರು. ಸ್ವಾಗತ ಕೋಣೆಯವರೆಗೂ ಪ್ರತಿಭಟನಾಕಾರರು ತಲುಪಿದ್ದರು. ಇದು ಅಮೆರಿಕಕ್ಕೆ ಭಾರಿ ಮುಖಭಂಗ ಉಂಟು ಮಾಡಿತ್ತು. ಇದೇ ಕಾರಣದಿಂದಲೇ ಸುಲೇಮಾನಿ ಹತ್ಯೆಗೈಯುವುದಕ್ಕೆಂದು ಅಮೆರಿಕ ಅಧ್ಯಕ್ಷರು ಆದೇಶ ನೀಡಿದ್ದರು.
ದಾಳಿ ನಡೆದ ತಕ್ಷಣ ನಾವು ಯಾಕೆ ದಾಳಿ ನಡೆಸಿದ್ದೇವೆ ಎಂಬುದಕ್ಕೆ ಕಾರಣವನ್ನೇನೋ ಅಮೆರಿಕ ನೀಡಿತು. ಇರಾನ್‌ನಿಂದ ಅಮೆರಿಕ ಸೇನೆ ಮತ್ತು ಸ್ವತ್ತಿನ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ದಾಳಿ ನಡೆಸಿದ್ದೇವೆ ಎಂದು ಅಮೆರಿಕ ಹೇಳಿಕೊಂಡಿತು. ಅದರೆ ಇದು ಸತ್ಯವಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅಮೆರಿಕದ ರಾಯಭಾರ ಕಚೇರಿಯ ಮೇಲೆ ನಡೆಸಿದ ದಾಳಿಗೆ ಉತ್ತರವಾಗಿ ಈ ದಾಳಿ ನಡೆಸಲಾಗಿದೆ ಎಂಬುದು ಇಡೀ ಜಗತ್ತಿಗೇ ಸ್ಪಷ್ಟವಾಗಿತ್ತು.
ಇರಾಕ್‌ನಲ್ಲಿ ಅಮೆರಿಕ ಸೇನೆಯನ್ನು ಹಿಂಪಡೆಯಬೇಕು ಎಂದು ಇರಾಕ್‌ನ ಸಂಸತ್ತು ನಿಲುವಳಿ ಮಂಡಿಸಿ ಅನುಮೋದಿಸಿದೆ. ಆದರೆ ಈ ಸಂಸತ್ ಅಧಿವೇಶನಕ್ಕೆ ಕುರ್ದ್ ಪ್ರಾಂತ್ಯದ ಜನಪ್ರತಿನಿಧಿಗಳು ಭಾಗವಹಿಸಲಿಲ್ಲ. ಇರಾಕ್ ಮತ್ತು ಸಿರಿಯನ್ನರಲ್ಲಿ ಕೆಲವರಿಗೆ ಸುಲೇಮಾನಿ ಸಾವನ್ನಪ್ಪಿದ್ದು ಸಮಾಧಾನ ತಂದಿದೆ. ಈತ ಈ ದೇಶಗಳಲ್ಲಿ ಹಿಂಸೆ ಹಾಗೂ ಗಲಭೆಗೆ ಕಾರಣವಾಗಿದ್ದ ಮತ್ತು ಈತನ ಮಧ್ಯಪ್ರವೇಶದಲ್ಲೇ ಇದು ನಡೆಯುತ್ತಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು.
ಸಿರಿಯಾದಿಂದ ಲೆಬನಾನ್‌ವರೆಗೆ ಬಂಡುಕೋರ ಸಂಘಟನೆಗಳ ನಿರ್ಧಾರಗಳ ಬಗ್ಗೆ ಸುಲೇಮಾನಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಕಳೆದ ಎರಡು ದಶಕಗಳಲ್ಲಿ ಈ ಭಾಗದಲ್ಲಿ ನಡೆದ ಬಹುತೇಕ ಎಲ್ಲ ಘಟನೆಗಳಿಗೂ ಈತ ಕಾರಣನಾಗಿದ್ದ ಎಂದು ಮಧ್ಯಪ್ರಾಚ್ಯ ವಿಷಯಗಳ ಪರಿಣಿತರಾದ ಕಿಮ್ ಘಟ್ಟಾಸ್ ಹೇಳುತ್ತಾರೆ. ಸುಲೇಮಾನಿ ವ್ಯಾಪ್ತಿ ಎಷ್ಟಿದೆಯೆಂದರೆ ಈ ವಲಯದಾಚೆಗೂ ಕೈಯಾಡಿಸುತ್ತಿದ್ದ. ನವದೆಹಲಿಯಲ್ಲಿ 2012 ಫೆಬ್ರವರಿಯಲ್ಲಿ ಇಸ್ರೇಲ್ ರಾಯಭಾರ ಅಧಿಕಾರಿಯ ಕಾರ್ ದಾಳಿಗೂ ಈತನೇ ನೇತೃತ್ವ ವಹಿಸಿದ್ದ ಎಂದು ಅವರು ಹೇಳುತ್ತಾರೆ. ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದರು.
ಇರಾನ್‌ನಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕುವಲ್ಲಿ ಸುಲೇಮಾನಿ ಪಾತ್ರವಂತೂ ಎಲ್ಲರಿಗೂ ತಿಳಿದಿರುವಂಥದ್ದಾಗಿದೆ. ಅನಿಲ ದರದಲ್ಲಿ ಶೇ. 200 ರಷ್ಟು ಏರಿಕೆ ಮಾಡಿದ್ದಕ್ಕಾಗಿ ವ್ಯಾಪಕ ಪ್ರತಿಭಟನೆ ಇರಾನ್‌ನಲ್ಲಿ ನಡೆದಾಗ ಅದನ್ನು ಹತ್ತಿಕ್ಕಲು ನವೆಂಬರ್‌ನಲ್ಲಿ ಏಳು ದಿನಗಳವರೆಗೆ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ರಾಯಿಟರ್ಸ್ ಪ್ರಕಾರ ಈ ಪ್ರತಿಭಟನೆಯ ವೇಳೆ 1,000 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಕಗ್ಗೊಲೆ ಮಾಡಲಾಗಿದೆ.
ಆದರೆ ಹಲವು ಇರಾನಿಯನ್ನರಿಗೆ ಸುಲೇಮಾನಿಯು ಚೆ ಗುವೆರಾ ರೀತಿಯ ವ್ಯಕ್ತಿ. ಈತ ಅಮೆರಿಕ ಹಾಗೂ ಐಸಿಸ್ ವಿರುದ್ಧ ಹೋರಾಟ ನಡೆಸಿದ ಎಂದು ಅಲ್ಲಿನ ಜನರು ಭಾವಿಸುತ್ತಾರೆ. ಅಷ್ಟೇ ಅಲ್ಲ, ಅಲ್ಲಿನ ಜನರು ಅಮೆರಿಕವನ್ನು ಸೈತಾನ ಎಂದೇ ಭಾವಿಸುತ್ತಾರೆ. ಸುಲೆಮಾನಿ ಹತ್ಯೆಯ ನಂತರ ಇರಾನ್‌ನ ಸಾರ್ವಜನಿಕರಲ್ಲಿ ಅಭಿಪ್ರಾಯ ಬದಲಾಗುತ್ತದೆ. ಇರಾನ್‌ನಲ್ಲಿ ನಿತ್ಯ ಜೀವನವೂ ಕಷ್ಟವಾಗುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಇರಾನ್ ವ್ಯವಹಾರಗಳ ಪರಿಣಿತ ಹಾಗೂ ಕಾರ್ನೆಗಿ ಎಂಡೋಮೆಂಟ್‌ನ ಕರೀಮ್ ಸದ್‌ಜದ್‌ಪುರ್ ಹೇಳಿದ್ದಾರೆ.
ಜನರಲ್ ಹತ್ಯೆಗೆ ಟ್ರಂಪ್ ಆದೇಶ ನೀಡಿದ್ದು ಅಮೆರಿಕದಲ್ಲೂ ಮಹತ್ವದ ರಾಜಕೀಯ ಬದಲಾವಣೆಗೆ ಕಾರಣವಾಗಿದೆ. ಈ ದಾಳಿಯಲ್ಲಿ ಅಮೆರಿಕ ಸೇನೆಯ ಹಲವು ಯೋಧರೂ ಸಾವನ್ನಪ್ಪಿದ್ದಾರೆ. ಸುಲೇಮಾನಿ ಹತ್ಯೆಯಿಂದ ಜಗತ್ತಿಗೆ ಒಳ್ಳೆಯದಾಯತು ಎಂಬುದನ್ನು ಡೆಮಾಕ್ರಾಟ್‌ಗಳು ಒಪ್ಪುತ್ತಾರೆ. ಆದರೆ ಟ್ರಂಪ್ ಈ ಬಗ್ಗೆ ನೀಡಿದ ಆದೇಶದ ರೀತಿಯ ಬಗ್ಗೆ ಅವರಿಗೆ ಆಕ್ಷೇಪವಿದೆ. ಈ ರೀತಿ ಆದೇಶ ನೀಡಿದ್ದರಿಂದ ಇರಾನ್ ಇದು ಯುದ್ಧ ಎಂದು ಭಾವಿಸುವ ಸಾಧ್ಯತೆಯಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ವಿಶ್ವದ ಹಲವು ದೇಶಗಳಲ್ಲಿ ಹಿಂಸೆಗೆ ಸುಲೆಮಾನಿ ಕಾರಣನಾಗಿದ್ದ. ಈತ ಅತ್ಯಂತ ಕ್ರೂರ ವ್ಯಕ್ತಿ. ಆದರೆ ಯುದ್ಧ ನಡೆಸಲು ಅಮೆರಿಕದ ಸಂಸತ್ತು ಅಧ್ಯಕ್ಷರಿಗೆ ಅನುಮತಿ ನೀಡಿಲ್ಲ. ಯುದ್ಧ ಭೀತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸಬೇಕಿದೆ. ಈ ದಾಳಿಯಿಂದಾಗಿ ಇರಾನ್‌ಗೆ ನಾವು ಪ್ರಚೋದನೆ ನೀಡಿದಂತಾಗಿದೆ ಎಂದು ಅಮೆರಿಕದ ಸಂಸತ್ ನ್ಯಾಯಾಂಗ ಸಮಿತಿಯ ಮುಖ್ಯಸ್ಥ ಜೆರ್ರಿ ನ್ಯಾಡ್ಲರ್ ಹೇಳಿದ್ದಾರೆ.
ಸುಲೆಮಾನಿ ಹತ್ಯೆಯ ಪ್ರಕರಣವು ಡೆಮಾಕ್ರಾಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳನ್ನೂ ಗೊಂದಲಕ್ಕೆ ಸಿಲುಕಿಸಿದೆ. ಚುನಾವಣೆಯ ಸಮಯದಲ್ಲಿ ಕೇವಲ ಆರೋಗ್ಯ ಸೇವೆ ಮತ್ತು ಇತರ ಪ್ರಾದೇಶಿಕ ವಿಷಯಗಳ ಮೇಲೆಯೇ ಗಮನ ಹರಿಸಬೇಕಾಗಿತ್ತು ಹಾಗೂ ಈ ಬಗ್ಗೆಯೇ ಅವರು ಪ್ರಣಾಳಿಕೆಗಳನ್ನು ಸಿದ್ಧಪಡಿಸಬೇಕಾಗಿತ್ತು. ಆದರೆ ಈಗ ಅಂತಾರಾಷ್ಟ್ರೀಯ ವಿಷಯಗಳೂ ಚುನಾವಣೆ ಪ್ರಚಾರ ಕಣಕ್ಕೆ ಧುಮುಕಿದಂತಾಗಿದೆ. ಇದು ಚುನಾವಣೆ ವೇಳೆ ಅಭ್ಯರ್ಥಿಗಳಿಗೆ ಇನ್ನಷ್ಟು ತಲೆಬಿಸಿ ಮಾಡಿವೆ. ಜನವರಿ 2 ರಂದು ಸುಲೇಮಾನಿಯನ್ನು ಕೊಲೆಗಾರ ಎಂದು ಅಭ್ಯರ್ಥಿ ಎಲಿಜಬೆತ್ ವಾರನ್‌ರನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಹೀಗಾಗಿ ಮೂರು ದಿನಗಳ ನಂತರ ಸಮರ್ಥನೆ ನೀಡುತ್ತಾ ಈತ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡರು.
ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ರಕ್ಷಣಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಲಿಯೊನ್ ಪನೆಟ್ಟಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಒಟ್ಟು ಪ್ರಕರಣವು ಟ್ರಂಪ್ ಅಧ್ಯಕ್ಷೀಯ ಅವಧಿಯ ಅತ್ಯಂತ ದೊಡ್ಡ ಪರೀಕ್ಷೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ, ಅಮೆರಿಕದ ಮಿತೃ ದೇಶಗಳನ್ನು ಅವಮಾನಿಸಿದ್ದಾರೆ. ತನ್ನ ವಿರುದ್ಧ ಮಾತನಾಡಿದವರನ್ನು ಹತ್ತಿಕ್ಕಿದ್ದಾರೆ ಮತ್ತು ಸ್ವಂತ ದೇಶದ ಗುಪ್ತಚರ ದಳಗಳನ್ನು ಕಡೆಗಣಿಸಿದ್ದಾರೆ. ಈ ಹಿಂದೆ ಅವರೇ ನಿರಂತರ ಯುದ್ಧ ನಡೆಸುವ ಪರಿಸ್ಥಿತಿಯನ್ನು ನಿಲ್ಲಿಸುತ್ತೇನೆ ಎಂದಿದ್ದರು. ಆದರೆ ಈಗ ತಮ್ಮದೇ ಹೇಳಿಕೆಗೆ ಬದ್ಧವಾಗದೇ ತಮ್ಮ ಬೆಂಬಲಿಗರನ್ನೇ ಕಡೆಗಣಿಸಿದಂತಾಗಿದೆ.
ಟ್ರಂಪ್ ಈಗ ದೊಡ್ಡದೊಂದು ರಿಸ್ಕ್ ತೆಗೆದುಕೊಂಡಿದ್ದಾರೆ. ಟ್ರಂಪ್ ಕೃತ್ಯದಿಂದಾಗಿ ಯುದ್ಧೋನ್ಮಾದ ಹೆಚ್ಚುತ್ತದೆಯೇ ಅಥವಾ ಇರಾನ್ ಯುದ್ಧ ಸಾರುವ ಮನಸ್ಥಿತಿಯನ್ನು ಬಿಡುತ್ತದೆಯೇ ಎಂಬುದು ಸದ್ಯ ಕಾದು ನೋಡಬೇಕಿರುವ ಸಂಗತಿಯಾಗಿದೆ.
ಸೀಮಾ ಸಿರೋಹಿ, ವಾಷಿಂಗ್ಟನ್ ಡಿಸಿ
ಲೇಖಕರು ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಹಿರಿಯ ಪತ್ರಕರ್ತೆಯಾಗಿದ್ದಾರೆ.