ಅಹಮದಾಬಾದ್: ರಬರಿ ಕಾಲೋನಿ ಬಳಿಯ ಖ್ಲೆಸಿಯಾ ಚರ್ಚ್ನ ಪಾದ್ರಿ 16 ವರ್ಷದ ಬಾಲಕಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಪಾದ್ರಿಯು ಅಶ್ಲೀಲ ಫೋಟೋ ಹಂಚಿಕೊಳ್ಳುವಂತೆ ಒತ್ತಾಯಿಸಿದ್ದು, ಕ್ರಿಶ್ಚಿಯನ್ ಧರ್ಮ ಸ್ವೀಕರಿಸಲು ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಅಹಮದಾಬಾದ್‌ನ ಅಮ್ರೈವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಲಾಗಿದೆ.
ಕಳೆದ ವರ್ಷ ಕ್ರಿಸ್‌ಮಸ್ ಸಮಯದಲ್ಲಿ ಬಾಲಕಿ ತನ್ನ ನೆರೆಹೊರೆಯವರೊಂದಿಗೆ ಚರ್ಚ್‌ಗೆ ಭೇಟಿ ನೀಡಿದಾಗ ಪಾದ್ರಿಯನ್ನು ಭೇಟಿಯಾಗಿದ್ದಳು. ಅಂದಿನಿಂದ ಪಾದ್ರಿ ಬಾಲಕಿಗೆ ಕಿರುಕುಳ ನೀಡುತ್ತಿದ್ದು, ಹೆತ್ತವರನ್ನು ಕೂಡಾ ಚರ್ಚ್‌ಗೆ ಆಹ್ವಾನಿಸುವಂತೆ ಒತ್ತಾಯಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
"ಅವರು ವಾಟ್ಸಾಪ್ ಮೂಲಕ ಚಾಟಿಂಗ್ ಪ್ರಾರಂಭಿಸಿದರು. ನಾನು ಒಬ್ಬಂಟಿಯಾಗಿರುವಾಗ ವಿಡಿಯೋ ಕರೆ ಮಾಡುತ್ತಿದ್ದರು. ಈ ವೇಳೆ ವಿವಸ್ತ್ರಳಾಗುವಂತೆ ಒತ್ತಾಯಿಸುತ್ತಿದ್ದರು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವಂತೆ ಬೆದರಿಕೆ ಹಾಕಿದ್ದರು" ಎಂದು ದೂರಿನಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ.
ಪಾದ್ರಿ ಬಾಲಕಿಯ ಕೆಲ ಫೋಟೋ ತೆಗೆದು ವಿಡಿಯೋ ಮಾಡಿದ್ದು, ಈ ಕುರಿತು ಕುಟುಂಬದಲ್ಲಿ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದ. ಅಲ್ಲದೆ, ಧಾರ್ಮಿಕ ಮತಾಂತರಕ್ಕಾಗಿ ಹೆತ್ತವರನ್ನು ಚರ್ಚ್‌ಗೆ ಕರೆತರುವಂತೆ ತಿಳಿಸಿದ್ದ ಎಂದು ಆರೋಪಿಸಲಾಗಿದೆ.
ಕೆಲವು ದಿನಗಳ ಹಿಂದೆ ತನ್ನ ಅಶ್ಲೀಲ ಚಿತ್ರಗಳನ್ನು ಪಾದ್ರಿ ದೂರದ ಸಂಬಂಧಿಗೆ ಕಳುಹಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದರಿಂದ ಬೇಸರಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತನ್ನ ತಂದೆಗೆ ಎಲ್ಲಾ ವಿಷಯ ತಿಳಿಸಿದ್ದಾಳೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.