ನವಸಾರಿ(ಗುಜರಾತ್): ದೇಶ ಮತ್ತು ಕರ್ತವ್ಯ ಎಲ್ಲಕ್ಕಿಂತ ಮುಖ್ಯ ಅನ್ನೋದು ತಲೆಯಲ್ಲಿದ್ರೆ ವೈಯಕ್ತಿಕ ಬದುಕು, ಕುಟುಂಬ ಯಾವುದೂ ಮುಖ್ಯವಲ್ಲ ಅಂತಾ ಈ ಪೊಲೀಸ್ ಕಾನ್ಸ್ಟೇಬಲ್ ತೋರಿಸಿಕೊಟ್ಟಿದ್ದಾರೆ.
ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸಣ್ಣ ಹಳ್ಳಿಯವರಾದ ಪೊಲೀಸ್ ಕಾನ್‌ಸ್ಟೆಬಲ್ ಸಂಜಯ್ ಸೋಲಂಕಿ, ದಕ್ಷಿಣ ಗುಜರಾತ್‌ನ ನವಸಾರಿ ಜಿಲ್ಲೆಯ ವಿಜಲ್ಪುರದಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದಾರೆ. ತುಂಬು ಗರ್ಭಿಣಿಯಾದ ಅವರ ಪತ್ನಿಗೆ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಣೆಯಾದ ಯಾವುದೇ ಸಮಯದಲ್ಲೂ ಹೆರಿಗೆಯಾಗುವ ಸಾಧ್ಯತೆ ಇತ್ತು. ಆದರೆ ದೇಶ ಕಠಿಣ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ವೈಯಕ್ತಿಕ ಜೀವನಕ್ಕಿಂತ ಕರ್ತವ್ಯವೇ ಮುಖ್ಯ ಎಂದು ಸಂಜಯ್ ಯುನಿಫಾರ್ಮ್ ತೊಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ.
ಕರ್ತವ್ಯದಲ್ಲಿದ್ದ ಸಂಜಯ್ಗೆ ಗುಡ್ನ್ಯೂಸ್:
ತುರ್ತು ಸಮಯವನ್ನು ಎದುರಿಸುತ್ತಿರುವ ದೇಶಕ್ಕಾಗಿ ಸೇವೆ ಸಲ್ಲಿಸಲು ಸಂಜಯ್ ತಮ್ಮ ಗರ್ಭಿಣಿ ಹೆಂಡತಿಯನ್ನು ಬಿಟ್ಟು ಬಂದಿದ್ದಾರೆ. ರಜೆಗಾಗಿ ಅವರು ತಮ್ಮ ಉನ್ನತ ಅಧಿಕಾರಿಗಳಿಗೆ ಅರ್ಜಿಯನ್ನೂ ಸಲ್ಲಿಸಲಿಲ್ಲ. ಈನಡುವೆ ಅವರ ಪತ್ನಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದೂರವಾಣಿ ಮೂಲಕ ಸಂತೋಷದ ವಿಚಾರ ತಿಳಿದ ಸಂಜಯ್, ವಿಡಿಯೋ ಕರೆ ಮಾಡುವ ಮೂಲಕ ಅವರು ತಮ್ಮ ಸಂತೋಷವನ್ನು ತಮ್ಮ ಮಡದಿಯೊಂದಿಗೆ ಹಂಚಿಕೊಂಡರು.
ಪತ್ನಿಯಿರುವಲ್ಲಿಗೆ ಹಿಂತಿರುಗಿ ತಮ್ಮ ನವಜಾತ ಶಿಶುವಿನ ಮುದ್ದು ಮುಖವನ್ನು ನೋಡಿ ಸಂತೋಷವನ್ನು ಅನುಭವಿಸುವ ಬದಲು, ಸಂಜಯ್ ಅವರು ತಮ್ಮನ್ನು ಕರ್ತವ್ಯಕ್ಕೆ ನೇಮಿಸಲಾದ ವಿಜಲ್ಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೊಲೀಸರಿಗೆ ಮಾದರಿಯಾದ ಸಂಜಯ್ಗೆ ನಗದು ಪ್ರಶಸ್ತಿ...
ಈ ಬಗ್ಗೆ ವಿಷಯ ತಿಳಿದ ಉನ್ನತ ಅಧಿಕಾರಿ ಸರಜು ಸಲುಂಕೆ, ದೇಶಕ್ಕಾಗಿ ಸೇವೆ ಸಲ್ಲಿಸಲು ಸಂಜಯ್ ತೋರಿದ ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮಾರ್ಚ್ 23 ರಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದಕ್ಕಾಗಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ. ಗಿರೀಶ್ ಪಾಂಡ್ಯ ಕೂಡ ಸಂಜಯ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇತರ ಸಿಬ್ಬಂದಿಗೆ ಮಾದರಿಯಾಗಿದ್ದಕ್ಕಾಗಿ ಸಂಜಯ್ ಅವರಿಗೆ ನಗದು ಪ್ರಶಸ್ತಿಯನ್ನೂ ಘೋಷಿಸಿದ್ದಾರೆ.
ತಮಗೆ ಗಂಡು ಮಗುವಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಸಂಜಯ್, ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಸಮಯದಲ್ಲಿ ಸೇವೆ ಸಲ್ಲಿಸುವುದು ತುಂಬಾ ಮುಖ್ಯ. ನಾನು ನನ್ನ ಶ್ರೀಮತಿಯೊಂದಿಗೆ ವಿಡಿಯೊ ಕರೆಯ ಮೂಲಕ ಮಾತನಾಡುತ್ತೇನೆ. ವಾಟ್ಸ್ಆ್ಯಪ್ ಮೂಲಕ ಮಗನ ಫೋಟೋ ಕೇಳಿದ್ದೇನೆ. ನಾನು ಮನೆಗೆ ಹೋಗುವವರೆಗೂ ಈ ಫೋಟೋ ನೋಡುತ್ತಿರುತ್ತೇನೆ ಎಂದು ಸಂಜಯ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.