ಪುಣೆ: ಕ್ಯಾನ್ಸರ್ಗೆ ಚಿಕಿತ್ಸೆ ನೀಡುವ ನೆಪದಲ್ಲಿ ವೈದ್ಯೆಯೊಬ್ಬರು, ಮಹಿಳೆಯಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಪೀಕಿರುವ ಆರೋಪ ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಡಾ. ವಿದ್ಯಾ ಧನಂಜಯ್ ಗೋದ್ರಾಸ್ ಎಂಬುವರ ವಿರುದ್ಧ ಸುಷ್ಮಾ ಸುಭಾಷ್ ಜಾಧವ್ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಕಾಲಕಾಲಕ್ಕೆ 1 ಕೋಟಿ 47 ಲಕ್ಷ 58 ಸಾವಿರ ರೂಪಾಯಿಯನ್ನು ಚಿಕಿತ್ಸೆಗಾಗಿ ವೈದ್ಯರು ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುಷ್ಮಾ ಅವರು ನೀಡಿದ ದೂರಿನ ಪ್ರಕಾರ, ಅವರು ರಕ್ಷಣಾ ವಿಭಾಗದಲ್ಲಿ ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ನೇಹಿತರ ಮೂಲಕ ಡಾ. ವಿದ್ಯಾ ಅವರನ್ನು ಭೇಟಿಯಾಗಿದ್ದರು. ಹೆಮಿಪ್ಲೆಜಿಯಾ ಮತ್ತು ಮೊಣಕಾಲು ನೋವಿಗೆ 2017 ರಲ್ಲಿ ಡಾ. ವಿದ್ಯಾ ಅವರಿಂದ ಚಿಕಿತ್ಸೆ ಪಡೆದಿದ್ದರು. ಅನ್ನನಾಳದ ಸಮಸ್ಯೆಯಿಂದ ಬಳಲುತ್ತಿದ್ದ ಅವರು 2019 ರಲ್ಲಿ ಡಾ. ವಿದ್ಯಾ ಅವರನ್ನು ಸಂಪರ್ಕಿಸಿದ್ದರು. ಈ ಬಾರಿ ವಿದ್ಯಾ ಅವರು ತಾನು ಕೆನಡಾದ ಆಯುರ್ವೇದ ಸಂಸ್ಥೆಯ ಪ್ರತಿನಿಧಿ ಕೆಲಸ ಮಾಡುತ್ತಿದ್ದು, ನಮ್ಮಲ್ಲಿ ಚಿಕಿತ್ಸೆ ತೆಗೆದುಕೊಂಡಿರುವ ಅನೇಕರು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
ತನ್ನ ಹೊಕ್ಕಳಿನ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಳುಹಿಸಲು ಸುಷ್ಮಾ ಅವರಿಗೆ ವೈದ್ಯೆ ಕೇಳಿದ್ದಾರೆ. ಅವರು ಫೋಟೋವನ್ನು ಕೆನಡಾದ ಸಂಸ್ಥೆಗೆ ಕಳುಹಿಸಿದ್ದು, ವರದಿಯಲ್ಲಿ ಯಕೃತ್ತಿನಲ್ಲಿ ಸಮಸ್ಯೆ ಇರುವುದು ತಿಳಿದಿದೆ ಎಂದು ಹೇಳಿದ್ದಾರೆ. ವರದಿ ಗೌಪ್ಯವಾಗಿದ್ದು ಸಂಪೂರ್ಣವಾಗಿ ಚೇತರಿಕೆ ಕಾಣುವವರೆಗೂ ತೋರಿಸಲಾಗುವುದಿಲ್ಲ. ಶೀಘ್ರವೇ ಚಿಕಿತ್ಸೆ ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಪ್ರಾಣಕ್ಕೇ ಅಪಾಯ ಎಂದು ಭಯ ಹುಟ್ಟಿಸಿದ್ದಾರೆ.
ವೈದ್ಯೆಯ ಮಾತಿನಿಂದ ಗಾಬರಿಗೊಂಡ ಸುಷ್ಮಾ, ಚಿಕಿತ್ಸೆಗಾಗಿ ತಕ್ಷಣ ಹಣ ಪಾವತಿಸಲು ಶುರು ಮಾಡಿದ್ದಾರೆ. ತನ್ನ ಸಂಬಳ, ಪಿಂಚಣಿ ಹಣ, ಅಂಚೆ ಠೇವಣಿ, ಮನೆ ಬಾಡಿಗೆಯಿಂದ ಬಂದ ಹಣ ಮತ್ತು ಗಂಡನ ವ್ಯವಹಾರದಿಂದ ಉಳಿಸಿದ ಹಣ ಎಲ್ಲವನ್ನೂ ವೈದ್ಯರಿಗೆ ನೀಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.
ಸುಷ್ಮಾ ಅವರಿಗೆ ಪ್ರಿಸ್ಕ್ರಿಪ್ಷನ್ ನೀಡದೆ ಮಾತ್ರೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಯಕೃತ್ತಿನ ಮೇಲಿನ ಭಾಗದಲ್ಲಿ ಕ್ಯಾನ್ಸರ್ ಇದೆ ಎಂದು ಹೇಳುತ್ತಾ 2020ರಲ್ಲಿ ಮತ್ತೆ ಹೊಕ್ಕಳಿನ ಫೋಟೋ ಕಳುಹಿಸಲು ಕೇಳಿದರು. ಅಲ್ಲದೆ ಮುಂಗಡವಾಗಿ ಏಳು ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದಾರೆ. ಸುಷ್ಮಾ ಹಣವಿಲ್ಲದೆ ತನ್ನ ಗಂಡನ ಬಳಿ ದುಡ್ಡಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪತಿ ಹಣದ ಬಗ್ಗೆ ಕೇಳಿದಾಗ, ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಪತಿ ಚಿಕಿತ್ಸೆಯ ವರದಿ ನೀಡುವಂತೆ ಕೇಳಿದ್ದಾರೆ, ಆದರೆ ವೈದ್ಯೆ ಮಾಹಿತಿ ನೀಡಲು ನಿರಾಕರಿಸಿದ್ದರಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.