ನವದೆಹಲಿ: ಒಬ್ಬ ಕೊರೊನಾ ಸೋಂಕಿತ 30 ದಿನಗಳಲ್ಲಿ ಕನಿಷ್ಠ 406 ಮಂದಿಗೆ ಕೊರೊನಾ ಹರಡಿಸುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿಯಲ್ಲಿ ಹೇಳಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಇದೇ ಕಾರಣದಿಂದ ಲಾಕ್ಡೌನ್ ಹಾಗೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕೆಂದು ಐಸಿಎಂಆರ್ ಕೇಂದ್ರ ಆರೋಗ್ಯ ಇಲಾಖೆಯಲ್ಲಿ ಮನವಿ ಮಾಡಿದೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೆ 30 ದಿನಗಳಲ್ಲಿ ಕೇವಲ ಇಬ್ಬರು ಅಥವಾ ಮೂವರಿಗೆ ಸೋಂಕು ಹರಡಿಸಲು ಸಾಧ್ಯ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.
ಈಗಿನ ವರದಿಯಂತೆ ಓರ್ವ ಕೊರೊನಾ ಸೋಂಕಿತ ಒಂದರಿಂದ ನಾಲ್ಕು ಮಂದಿಗೆ ಕೊರೊನಾ ಹರಡಿಸುತ್ತಿದ್ದಾನೆ ಎಂದು ಐಸಿಎಂಆರ್ ವರದಿಯಲ್ಲಿ ಹೇಳಿದೆ ಎಂದು ಲಾವ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.
ಇದರಿಂದಾಗಿ ಸಾರ್ವಜನಿಕರು ಸರ್ಕಾರ ವಿಧಿಸಿದ ಲಾಕ್ಡೌನ್ ಅನ್ನು ಪಾಲಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕೊರೊನಾಗೆ ಸಾಮಾಜಿಕ ಮದ್ದು ಎಂಬ ಮಾತನ್ನು ಈ ವೇಳೆ ಲಾವ್ ಅಗರ್ವಾಲ್ ಉಲ್ಲೇಖಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾತನಾಡಿದ ಅವರು ಲಾಕ್ಡೌನ್ ವಿಸ್ತರಣೆ ಬಗ್ಗೆ ಊಹಾಪೋಹಗಳನ್ನು ಹರಡಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಔಷಧ ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದು, ಬೇಡಿಕೆಗೆ ತಕ್ಕಂತೆ ಹೈಡ್ರೋಕ್ಸಿಕ್ಲೋರೋಕ್ವಿನ್ ಹಾಗೂ ಇನ್ನೂ ಹಲವು ಔಷಧಗಳನ್ನು ಆಸ್ಪತ್ರೆಗಳಿಗೆ ಪೂರೈಸಲಾಗುತ್ತದೆ. ಕೊರೊನಾ ಸೋಂಕಿತರನ್ನು ಮೂರು ವಿಭಾಗಗಳಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.