ಹೈದರಾಬಾದ್ (ತೆಲಂಗಾಣ): ಪೊಲೀಸರ ಗಸ್ತು ವಾಹನ ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಹೈದರಾಬಾದ್ನಲ್ಲಿ ಬುಧವಾರ ನಡೆದಿದೆ. ಹರ್ಷವರ್ಧನ್ (6) ಮೃತ ಬಾಲಕ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ದೂರುವಾಣಿ ಕರೆ ಮೂಲಕ ಮಾಹಿತಿ ನೀಡಿರುವ ಇನ್ಸ್ಪೆಕ್ಟರ್ ರಣವೀರ್ ರೆಡ್ಡಿ, ಪೊಲೀಸರ ಗಸ್ತು ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಂಗಲ್‌ಹಾಟ್ ಪೊಲೀಸ್ ಠಾಣೆಯ ಪೆಟ್ರೋಲಿಂಗ್ ಜೀಪ್ಅನ್ನು ಕರ್ತವ್ಯನಿರತ ವಿಶೇಷ ಪೊಲೀಸ್ ಅಧಿಕಾರಿ ಭಗವಂತ್ ರೆಡ್ಡಿ ಚಾಲನೆ ಮಾಡುತ್ತಿದ್ದರು. ಆಕಸ್ಮಿಕ ಹಾಗೂ ನಿರ್ಲಕ್ಷ್ಯತನದಿಂದ ಈ ದುರ್ಘಟನೆ ಸಂಭವಿಸಿದ್ದು ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಎ ಅಡಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುವುದಾಗಿ ಅವರು ಹೇಳಿದರು.
ಹರ್ಷವರ್ಧನ್ ಉಪಾಹಾರ ಗೃಹವೊಂದರ ಮುಂದೆ ನಿಂತು ತಟ್ಟೆ ತೊಳೆಯುತ್ತಿದ್ದ, ಈ ವೇಳೆ ಇದ್ದಕ್ಕಿಂತೆ ಪೊಲೀಸರ ಗಸ್ತು ವಾಹನ ಡಿಕ್ಕಿ ಹೊಡೆದ ಪರಿಣಾಮ ತನ್ನ ಮಗ ಅಸುನೀಗಿರುವುದಾಗಿ ಮೃತ ಬಾಲಕನ ತಂದೆ ಶ್ರೀನಿವಾಸ್ ನೋವು ತೋಡಿಕೊಂಡಿದ್ದಾರೆ.