ಕಾನ್ಪುರ್(ಉತ್ತರ ಪ್ರದೇಶ): ನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಮಹಿಳೆಯರು ಮತ್ತು ಬಾಲಕಿಯರು ಸೇರಿ ಒಟ್ಟು 57 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆಘಾತಕಾರಿ ವಿಷಯ ಎಂದರೆ ಕೋವಿಡ್ ಪಾಸಿಟಿವ್ ಬಂದಿರುವವರಲ್ಲಿ ಇಬ್ಬರು ಅಪ್ರಾಪ್ತೆಯರು ಸೇರಿದಂತೆ ಐವರು ಗರ್ಭಿಣಿಯರಾಗಿರುವ ವಿಚಾರ ಬೆಳಕಿಗೆ ಬಂದಿದೆ. ಜೊತೆಗೆ ಗರ್ಭಿಣಿಯರಾದ ಇಬ್ಬರು ಬಾಕಿಯರಿಗೆ ಹೆಚ್ಐವಿ ಪಾಸಿಟಿವ್ ಇದ್ದು, ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಎಎಸ್ಪಿ ದಿನೇಶ್ ಕುಮಾರ್. ಪಿ ಮಾತನಾಡಿ, ವಸತಿ ನಿಲಯದ 57 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈ ಪೈಕಿ ಐವರು ಗರ್ಭಿಣಿಯರಿದ್ದಾರೆ. ಗರ್ಭಿಣಿಯರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿದ್ದು, ಅವರಿಗೆ ಹೆಚ್ಐವಿ ಪಾಸಿಟಿವ್ ಇದೆ. ಇವರೆಲ್ಲರನ್ನೂ ಆಗ್ರಾದ ಮಕ್ಕಳ ಕಲ್ಯಾಣ ಸಮಿತಿ ಇಲ್ಲಿಗೆ ಕಳುಹಿಸಿದೆ. ಇಟಾ, ಕನೌಜ್, ಫಿರೋಜಾಬಾದ್, ಕಾನ್ಪುರದಿಂದ ವಸತಿ ನಿಲಯಕ್ಕೆ ಬಂದಿದ್ದಾರೆ. ಇಲ್ಲಿಗೆ ಬರುವ ಮೊದಲೇ ಇವರೆಲ್ಲರೂ ಗರ್ಭಿಣಿಯರಾಗಿದ್ದರು. ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿರುವುದರಿಂದ ಈ ಪ್ರಕರಣ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗಟ್ಟುವಿಕೆ (ಪೊಕ್ಸೋ) ಕಾಯ್ದೆಯಡಿ ಬರುತ್ತದೆ ಎಂದು ಹೇಳಿದ್ದಾರೆ.
ಕಾನ್ಪುರ್ ಆಯುಕ್ತ ಸುಧೀರ್ ಮಹಾದೇವ್ ಪ್ರತಿಕ್ರಿಯಿಸಿ, ಒಂದು ವಾರದ ಹಿಂದೆ ವಸತಿ ನಿಲಯದ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ನಂತರ ಜೂನ್ 18 ರಂದು ನಡೆಸಿದ ಪರೀಕ್ಷೆಯಲ್ಲಿ ಮತ್ತೆ 33 ಬಾಲಕಿಯರಿಗೆ ಪಾಸಿಟಿವ್ ಬಂದಿತ್ತು. ಇದಾದ ಎರಡು ದಿನದ ನಂತರ ನಡೆಸಿದ ಪರೀಕ್ಷೆಯಲ್ಲಿ ಇನ್ನೂ 28 ಬಾಲಕಿಯರಿಗೆ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ಐವರು ಸೇರಿ ಒಟ್ಟು ಏಳು ಮಂದಿ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಪಾಸಿಟಿವ್ ಬಂದವರ ಪೈಕಿ ಇಬ್ಬರು ಗರ್ಭಿಣಿ ಬಾಲಕಿಯರಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಧಿಕಾರಿಗಳು ಸೋಂಕಿತ ಗರ್ಭಿಣಿ ಬಾಲಕಿಯರ ಹಿನ್ನೆಲೆ ಪತ್ತೆ ಹಚ್ಚುತ್ತಿದ್ದು, ಈ ಸಂಬಂಧ ವಸತಿ ನಿಲಯಕ್ಕೆ ಬಾಲಕಿಯರನ್ನ ಕಳುಹಿಸಿಕೊಟ್ಟವರನ್ನು ಸಂಪರ್ಕಿಸಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಬಾಕಿಯರು ಗರ್ಭಿಣಿಯಾಗಲು ಕಾರಣರಾದವರ ಮೇಲೆ ಈಗಾಗಲೇ ಆಗ್ರಾ ಮತ್ತು ಕನೌಜ್ನಲ್ಲಿ ಪ್ರಕರಣ ದಾಖಲಾಗಿದೆ.