ಮಲ್ಕಂಗಿರಿ: ಒಡಿಶಾದ ಬುಡಕಟ್ಟು ಪ್ರಾಬಲ್ಯವಿರುವ ಮಲ್ಕಂಗಿರಿ ಜಿಲ್ಲೆಯ ಕುಮುಟಿಗುಡ ಗ್ರಾಮದಲ್ಲಿ ಮೂವರು ಸಹೋದರಿಯರು ತಮ್ಮ ತಂದೆಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ತಂದೆಯ ಅಂತಿಮ ಸಂಸ್ಕಾರವನ್ನು ಹಿಂದೂ ಸಂಪ್ರದಾಯದ ಪ್ರಕಾರ ಪುರುಷರೇ ನೆರವೇರಿಸಬೇಕು ಎಂಬುದು ವಾಡಿಕೆ. ಆದರೆ, ಕುಮುಟಿಗುಡ ಗ್ರಾಮದ ನಿವಾಸಿ ಸುಶಾಂತ್ ಪಟ್ನಾಯಕ್ ಅವರಿಗೆ ಮೂವರು ಪುತ್ರಿಯರಿದ್ದು, ಇವರೇ ತಂದೆಯ ಅಂತಿಮ ವಿಧಿ- ವಿಧಾನಗಳನ್ನು ನೆರವೇರಿಸಿದ್ದಾರೆ.
ಕುಮುಟಿಗುಡದಲ್ಲಿ ಸೈಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸುಶಾಂತ್ ಪಟ್ನಾಯಕ್ ಅವರು, ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಚಿಕಿತ್ಸೆಗಾಗಿ ಮಲ್ಕಂಗಿರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಮತ್ತೆ ಸಾಹಿದ್ ಲಕ್ಷ್ಮಣ್ ನಾಯಕ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಸ್ವಲ್ಪ ದಿನಗಳ ನಂತರ ಚಿಕಿತ್ಸೆ ಫಲಕಾರಿ ಆಗಿದೆ ಮೃತಪಟ್ಟರು.
ಸುಶಾಂತ್ ಪಟ್ನಾಯಕ್ ಅವರ ಪುತ್ರಿಯರಾದ ಸಸ್ಮಿತಾ, ಸ್ಮಿತಾ ಮತ್ತು ಸಂಗೀತಾ ಅವರು ತಮ್ಮ ತಂದೆಯ ಅಂತಿಮ ವಿಧಿಗಳನ್ನು ನೆರವೇರಿಸುವ ಕುರಿತು ನೆರೆ-ಹೊರೆಯವರೊಂದಿಗೆ ಚರ್ಚಿಸಿ ಅವರ ಸಲಹೆ ಪಡೆದಿದ್ದರು. ಆರಂಭದಲ್ಲಿ ಸಂಬಂಧಿಕರು ಹಾಗೂ ನೆರೆಹೊರೆಯವರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಕುಟುಂಬದಲ್ಲಿ ಒಬ್ಬ ಮಗನೂ ಇಲ್ಲದ ಕಾರಣ ಅಂತಿಮ ಸಂಸ್ಕಾರಕ್ಕೆ ಅನುಮತಿ ನೀಡಿದ್ದಾರೆ.
ಪುರುಷ ಪ್ರಧಾನವಾದ ಹಿಂದೂ ಧರ್ಮದಲ್ಲಿ ತಂದೆಯ ಅಂತ್ಯಕ್ರಿಯೆಯ ಮಹಿಳೆಯರೇ ಮಾಡಿದ್ದು ಜಿಲ್ಲೆಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಕೆಲವು ಕಟ್ಟಾ ಸಂಪ್ರದಾಯವಾದಿಗಳು ಈ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.